ಎಲ್ಲೂರಿನ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಹಡಿಲು ಭೂಮಿ ಕೃಷಿ
ಸ್ವಂತ ಕೃಷಿ ಭೂಮಿಯನ್ನು ಹೊಂದಿಲ್ಲದ ಕಾಪು ತಾಲೂಕಿನ ಎಲ್ಲೂರು ಗ್ರಾಮದ ದಾರು ಶಿಲ್ಪಿ ವೈ. ಪ್ರಶಾಂತ್ ಆಚಾರ್ಯ ಹಡೀಲು ಗದ್ದೆಯನ್ನು ಎರವಲು ಪಡೆದು ಭತ್ತದ ಬೇಸಾಯವನ್ನು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ.

ಯುವಕರು ಕೃಷಿಯಿಂದ ವಿಮುಕ್ತರಾಗುತ್ತಿರುವ ಈ ಕಾಲ ಘಟ್ಟದಲ್ಲಿ ಈ ಯುವಕನ ಕೃಷಿ ಕಾಯಕ ನಿಜಕ್ಕೂ ಮಾದರಿಯಾಗಿದೆ. ಈ ಬಾರಿ ಸುಮಾರು ೪ ಎಕರೆಗೂ ಮಿಕ್ಕಿದ ಗದ್ದೆಯಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.
ತಾನು ಎರವಲು ಪಡೆದ ಗದ್ದೆಯಲ್ಲಿ ಎಂಒ ೪ ಭತ್ತದ ತಳಿಯನ್ನು ಬಿತ್ತನೆ ಮಾಡಿ ಸ್ವತಃ ಭತ್ತದ ಸಸಿಯನ್ನು ಸಿದ್ಧಪಡಿಸಿಕೊಂಡು ಇದೀಗ ೨೨ ದಿನಗಳ ನೇಜಿಯನ್ನು ನಾಟಿ ಮಾಡಲು ತೊಡಗಿಕೊಂಡಿರುವ ಕೃಷಿಕ ಪ್ರಶಾಂತ್ ಅವರು ಪಡುಬಿದ್ರಿಯ ಕಂಚಿನಡ್ಕ, ಎಲ್ಲೂರಿನ ಪೆಜತ್ತಕಟ್ಟೆ, ಬಂಡಸಾಲೆ, ಮುದರಂಗಡಿಯ ವಿದ್ಯಾನಗರ ಪ್ರದೇಶದ ಮಹಿಳೆಯರ ನಾಲ್ಕು ತಂಡಗಳನ್ನು ಬಳಸಿಕೊಂಡು ಒಟ್ಟು ೨೬ ಕೃಷಿ ಕೂಲಿ ಮಹಿಳಾ ಕಾರ್ಮಿಕರು ನೇಜಿ ತೆಗೆದು ನಾಟಿ ಮಾಡುವ ಕೆಲಸ ಕಾರ್ಯದಲ್ಲಿ ಬಳಸಿಕೊಂಡಿರುತ್ತಾರೆ.
ದಿನವಹಿ ಊಟ ಚಹಾ ತಿಂಡಿ ವಾಹನದ ಸೌಕರ್ಯದೊಂದಿಗೆ ರೂ. ೪೦೦ ಕೂಲಿಯನ್ನು ಪ್ರತಿಯೋರ್ವ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡುವ ಮೂಲಕ ಎರಡು ದಿನಗಳಲ್ಲಿ ೪ ಎಕರೆ ಗದ್ದೆಯ ನಾಟಿಯನ್ನು ಪೂರೈಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕೃಷಿ ಚಟುವಟಿಕೆಗೆ ನೆರೆ ಹೊರೆಯ ಹಿರಿಯ ನುರಿತ ಕೃಷಿಕರಾದ ಹರೀಶ್ ಪೂಜಾರಿ, ಶಂಕರ್ ಮತ್ತಿತರರ ಮಾರ್ಗದರ್ಶನದೊಂದಿಗೆ ಸಹೋದರರು ಸಹಿತ ಮನೆಮಂದಿಯೂ ಕೈ ಜೋಡಿಸುವ ಮೂಲಕ ಯಶಸ್ವಿ ಕೃಷಿಕನಾಗಿ ಬೆಳೆದು ಬಂದಿದ್ದಾರೆ.
ಕಳೆದ ೭ ವರ್ಷಗಳ ಹಿಂದೆ ಕೃಷಿಯ ಬೆನ್ನತ್ತಿದ್ದ ಈ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ, ಈ ಬಾರಿ ಟ್ರಾಕ್ಟರ್ ಮೂಲಕ ಉಳುಮೆ ನಡೆಸಿದ್ದು, ಸುಮಾರು ಐವತ್ತು ಸಾವಿರ ರುಪಾಯಿ ಖರ್ಚುವೆಚ್ಚ ಭರಿಸಿದ್ದು, ದುಪ್ಪಟ್ಟು ಲಾಭದ ನಿರೀಕ್ಷೆ ಹೊಂದಿದ್ದಾರೆ.
ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದ್ದು, ಮಳೆ ನೀರು ಕಡಿಮೆಯಾದಲ್ಲಿ ಸಮೀಪದಲ್ಲಿ ಹರಿಯುವ ನೀರಿನ ತೋಡಿನಿಂದ ನೀರನ್ನು ಬಳಸುವುದಾಗಿ ಮಾಹಿತಿಯನ್ನು ನೀಡಿದ್ದು, ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಗದ್ದೆಯ ಮಾಲಕರು, ಹಿರಿಯ ಕೃಷಿಕರು, ಮನೆಮಂದಿಯ ಸಹಕಾರ ದಿಂದ , ಲಭ್ಯ ಅವಕಾಶದಡಿ ಮತ್ತಷ್ಟು ಹಡೀಲು ಭೂಮಿಯನ್ನು ಕೃಷಿಗೆ ಬಳಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ಸಮರ್ಪಕ ಮಾಹಿತಿ ನೀಡಿದ್ದಾರೆ.
