ರಾಷ್ಟ್ರಪತಿಯ ಮೇಲಿನ ಗೌರವದಿಂದ 10 ರೂ.ಗೆ ಪಾನಿಪೂರಿ ಮಾರಾಟ: ಸಾರ್ವತ್ರಿಕ ಶ್ಲಾಘನೆ
ಉಡುಪಿ: ದೇಶದ ರಾಷ್ಟ್ರಪತಿ ದ್ರೌಪತಿ ಮುರ್ಮುರವರು ನಮ್ಮ ಊರಿನವರೆಂಬ ಅಭಿಮಾನದಿಂದ ಹಾಗೂ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಉದ್ಯಾವರದಲ್ಲಿ ಪಾನಿಪೂರಿ ವ್ಯಾಪಾರ ಮಾಡುವ ಒರಿಸ್ಸಾ ಮೂಲದ ಯುಧಿಷ್ಠಿರ ಶೆತ್ತಿಯವರು 10 ರೂ.ಗೆ ಪಾನಿಪೂರಿ ಮಾರಾಟ ಮಾಡುವ ಮೂಲಕ ಪಾನಿಪೂರಿ ಪ್ರಿಯರಿಗೆ, ಮಕ್ಕಳಿಗೆ ರಾಷ್ಟ್ರಪ್ರೇಮದ ಅರಿವು ಮೂಡಿಸಿದ್ದಾರೆ.
ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಪಾನಿಪೂರಿ ವ್ಯಾಪಾರ ಮಾಡುವ ಒಡಿಸ್ಸಾ ಮೂಲಕ ಯುಧಿಷ್ಠಿರ ಶೆಟ್ಟಿ ಕಳೆದ 7 ವರ್ಷಗಳಿಂದ ದಿನನಿತ್ಯ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ನಡೆಸುತ್ತಿದ್ದಾರೆ.
ಆದರೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮ್ ಅವರು ತನ್ನೂರಿನ ಹೆಮ್ಮೆಯ ಪುತ್ರಿ ಎಂಬ ಗೌರವದ ಮನೋಭಾವನೆಯಿಂದ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಾಗಿ ಬೆಳಿಗ್ಗೆ 10 ಗಂಟೆಯಿಂದಲೇ ವ್ಯಾಪಾರ ಆರಂಭಿಸಿದ್ದು, ರಾತ್ರಿ 11 ಗಂಟೆಯವರೆಗೂ ವ್ಯಾಪಾರವನ್ನು ನಡೆಸಲಿದ್ದಾರೆ.
ಪಾನಿಪೂರಿಗೆ ಪ್ಲೇಟೊಂದರ ದರ 30 ರೂ ಇದ್ದರೂ ಈ ಸಂಭ್ರಮದ ಕೊಡುಗೆಯಾಗಿ ಕೇವಲ 10 ರೂ.ಗೆ ಪಾನಿಪೂರಿ ನೀಡುವ ಮೂಲಕ ಪಾನಿಪುರಿ ಪ್ರಿಯರಿಗೆ 77ನೇ ಸ್ವಾತಂತ್ರ್ಯೋತ್ಸವದ ಧಮಾಕ ಲಭಿಸಿದಂತಾಗಿದ್ದು, ಬೆಳಿಗ್ಗಿನಿಂದಲೇ ಮಕ್ಕಳು, ಮಹಿಳೆಯರು, ಯುವಕರ ಸಹಿತ ಸಾರ್ವಜನಿಕರು 10 ರೂ. ಬೆಲೆಯ ಪಾನಿಪೂರಿ ರುಚಿ ಸವಿಯಲು ಮುಗಿ ಬಿದ್ದಿರುವುದು ಕಂಡು ಬಂದಿದೆ.

