ಗ್ಯಾರಂಟಿಗಳ ಒತ್ತಡಕ್ಕೆ ಮಣಿದು ಸಿಲಿಂಡರ್ ಬೆಲೆ ಇಳಿಕೆ ಮಾಡಿದ ಮೋದಿ‘- ಡಿ.ಕೆ.ಶಿವಕುಮಾರ್
ಬೆಂಗಳೂರು: ಆ 30: ನಾವು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಪರಿಹಾರ ಎಂದು 500 ರೂ ಸೇರಿಸಿ ಮಹಿಳೆಯರಿಗೆ 2 ಸಾವಿರ ನೀಡುತ್ತಿದ್ದೇವೆ. ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿಯವರು ಗ್ಯಾಸ್ ಸಿಲಿಂಡರ್ ಬೆಲೆಯನ್ನ 200 ರೂಪಾಯಿ ಕಡಿಮೆ ಮಾಡಿದ್ದಾರೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಉಚಿತ ಕೊಡುಗೆಯಿಂದ ದಿವಾಳಿಯಾಗಲಿದ್ದೇವೆ ಎಂದವರು ಏಕೆ ಮಧ್ಯಪ್ರದೇಶದಲ್ಲಿ 1,500 ಕೊಡುತ್ತಿದ್ದಾರೆ? 200 ರೂಪಾಯಿ ಸಿಲಿಂಡರ್ ಬೆಲೆ ಏಕೆ ಇಳಿಸಿದ್ದಾರೆ?. ಬಿಜೆಪಿ ಆಡಳಿತವಿರುವ ರಾಜ್ಯಗಳ ಮಹಿಳೆಯರು, ಕಾಂಗ್ರೆಸ್‌ನವರು ಉಚಿತ ಕೊಡುತ್ತಿದ್ದಾರೆ ನಿಮಗೆ ಏಕೆ ಆಗುತ್ತಿಲ್ಲ ಎಂದು ಬೈಯ್ಯುತ್ತಿದ್ದಾರೆ.
ಈ ದೇಶದ ಜನರಿಗೆ ಹಣ ಕೊಡಲು ನಮ್ಮದೇನು ತಕರಾರಿಲ್ಲ. ಆದರೆ “ಕರ್ನಾಟಕ ಮಾದರಿ”ಯಿಂದ ಹೆದರಿಕೊಂಡಿದ್ದಾರೆ ಎಂಬುದು ಸತ್ಯ ಎಂದರು.
ಸ್ತ್ರೀಶಕ್ತಿ, ಗೃಹಜ್ಯೋತಿ, ಅನ್ನ ಭಾಗ್ಯ ಎಲ್ಲಾ ಗ್ಯಾರಂಟಿಗಳು ಯಶಸ್ವಿಯಾಗಿವೆ. ಇದರಿಂದ ಇಡೀ ದೇಶದ ಹೆಣ್ಣು ಮಕ್ಕಳು “ಕರ್ನಾಟಕ ಮಾದರಿ”ಗೆ ಮನಸೋತಿದ್ದಾರೆ. ನಾವು 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಕಾಂಗ್ರೆಸ್ ಪಕ್ಷದ ಇದನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದೆ. ಜನರು ಸಂಭ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

