ಮೈಸೂರು : ಸನಾತಮ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ. ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಅವರ ಮಗ ಮತ್ತು ಸಚಿವರಾಗಿರುವ ಉದಯಗಿರಿ ಸ್ಟಾಲಿನ್ ಅವರ ಹೇಳಿಕೆಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಲವಾಗಿ ಖಂಡಿಸಿದ್ದಾರೆ.
ಮೈಸೂರಿನಲ್ಲಿ ಚಾತುರ್ಮಾಸ ವೃತದಲ್ಲಿರುವ ಶ್ರೀಗಳು ವಿಡಿಯೋ ಹೇಳಿಕೆಯನ್ನು ನೀಡಿದ್ದು, ರಾಜ್ಯದ ಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉದಯಗಿರಿ ಸ್ಟಾಲಿನ್ ಅವರು ಸಮಾಜದಲ್ಲಿ ಇಂತಹ ವಿಷ ಬೀಜವನ್ನು ಬಿಚ್ಚುವುದು ಸರಿಯಲ್ಲ. ಅವರನ್ನು ಏನಂತ ಕರೆಯಬೇಕು ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸನಾತನ ಎಂದರೆ, ಸದಾ ಕಾಲವೂ ಇರುವಂತಹದ್ದು ಎಂದರ್ಥ. ಎಲ್ಲರೂ ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ನಮ್ಮ ಸುಖದಿಂದ ಅಕ್ಕಪಕ್ಕದವರಿಗೆ ದುಃಖವಾಗಬಾರದು, ಬದಲಾಗಿ ನಮ್ಮ ಸುಖದಿಂದ ಅಕ್ಕಪಕ್ಕದವರಿಗೂ ಸುಖವಾಗಬೇಕು ಎನ್ನುತ್ತದೆ ಸನಾತನ ಧರ್ಮ. ಆದ್ದರಿಂದ ಅಂತಹ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಮನೋಪ್ರವೃತ್ತಿ ಸರಿಯಲ್ಲ, ಅದನ್ನು ಖಂಡಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.

