• Home  
  • ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ವಿಟ್ಲಪಿಂಡಿ ಆಚರಣೆ
- ಕರಾವಳಿ - ಪ್ರಚಲಿತ - ವಿಡಿಯೋ

ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ವಿಟ್ಲಪಿಂಡಿ ಆಚರಣೆ

Share: ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ವಿಟ್ಲಪಿಂಡಿ ಆಚರಣೆ ಉಡುಪಿ:  ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಕೃಷ್ಣ ಲೀಲೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗುರುವಾರ ಮಠದ ಹೊರಗೆ ರಥಬೀದಿಯಲ್ಲಿ ವೈಭವದ ಚಿನ್ನದ ರಥೋತ್ಸವ, ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಆಚರಣೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಗಳಾದರು.   ಮಧ್ಯಾಹ್ನ 3 ಗಂಟೆಗೆ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಠದಿಂದ ಹೊರಗೆ ತಂದು […]

ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ವಿಟ್ಲಪಿಂಡಿ ಆಚರಣೆ

ಉಡುಪಿ:  ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಕೃಷ್ಣ ಲೀಲೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗುರುವಾರ ಮಠದ ಹೊರಗೆ ರಥಬೀದಿಯಲ್ಲಿ ವೈಭವದ ಚಿನ್ನದ ರಥೋತ್ಸವ, ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಆಚರಣೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಗಳಾದರು.

  ಮಧ್ಯಾಹ್ನ 3 ಗಂಟೆಗೆ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಠದಿಂದ ಹೊರಗೆ ತಂದು ರಥಬೀದಿಯಲ್ಲಿ ಚಿನ್ನದ ರಥಕ್ಕೆ ಆರೋಹಣ ನಡೆಸಿದರು.

  ಸಂಪ್ರದಾಯದಂತೆ ಗೊಲ್ಲ ವೇಷಧಾರಿಗಳು ಕುಣಿಯುತ್ತಾ ಕೈಯಲ್ಲಿದ್ದ ಉದ್ದದ ಕೋಲಿನಿಂದ, ಕೃಷ್ಣಮಠದ ಎದುರು ಎತ್ತರದ ಗುರ್ಜಿಯಲ್ಲಿ ಕಟ್ಟಿದ್ದ ಮೊಸರು, ಕಜ್ಜಾಯ, ಹಾಲಿನ ಕುಡಿಕೆಗಳನ್ನು ಒಡೆದು ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ ನೀಡಿದರು.

  ರಥದಲ್ಲಿ ಶ್ರೀಗಳಿಂದ ಕೃಷ್ಣನಿಗೆ ಪೂಜೆ ಮುಗಿಯುತ್ತಿದ್ದಂತೆ ಭಕ್ತರು ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ಚಿನ್ನದ ರಥವನ್ನು ಎಳೆದರು. ನಡುವೆ ಅಲ್ಲಲ್ಲಿ ಗೊಲ್ಲ ವೇಷಧಾರಿಗಳು ಮೊಸರು ಗಡಿಕೆಗಳನ್ನು ಒಡೆಯುತ್ತಾ ಕೃಷ್ಣನ ಲೀಲೆಗಳನ್ನು ಪ್ರದರ್ಶಿಸಿದರು.

 ಕಿಕ್ಕಿರಿದು ತುಂಬಿದ್ದ ರಥಬೀದಿಯಲ್ಲಿ ಹುಲಿವೇಷ ಮತ್ತು ವೈವಿಧ್ಯಮಯ ವೇಷದಾರಿಗಳು ಕುಣಿಯುತ್ತಾ  ಜನರ ಮನರಂಜಿಸಿದರು.

  ರಥಬೀದಿಯಲ್ಲಿ ಹಾಕಲಾಗಿದ್ದ ವೇದಿಕೆಯಿಂದ ಪರ್ಯಾಯ ಕೃಷ್ಣಾಪುರ ಶ್ರೀಗಳು ಕೃಷ್ಣಾಷ್ಟಮಿಯ ಪ್ರಸಾದ ಉಂಡೆ – ಚಕ್ಕುಲಿಗಳನ್ನು ನೆರೆದ ಭಕ್ತರಿಗೆ ಸಾಂಕೇತಿಕವಾಗಿ ವಿತರಿಸಿದರು.

  ರಥೋತ್ಸವದ ನಂತರ ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ರಥಾವರೋಹಣಗೊಳಿಸಿ ಮಧ್ವಸರೋವರದಲ್ಲಿ ವಿಸರ್ಜಿಸುವ ಮೂಲಕ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಸಮಾಪನಗೊಂಡಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.