ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣ : ಹಾಲಶ್ರೀ ಸ್ವಾಮೀಜಿ ಒರಿಸ್ಸಾದಲ್ಲಿ ಬಂಧನ
ಕಟಕ್\ ಒರಿಸ್ಸಾ: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಒರಿಸ್ಸಾ ರಾಜ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀಯನ್ನು ಇಂದು (ಸೆಪ್ಟೆಂಬರ್ 19) ಒಡಿಶಾದ ಕಟಕ್‌ನಲ್ಲಿ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದ ಸ್ವಾಮೀಜಿ ನಾಪತ್ತೆಯಾಗಿದ್ದರು. ಅವರು ಆಶ್ರಮದಲ್ಲಿರುವ ಕಾರನ್ನು ಖುದ್ದಾಗಿ ಡ್ರೈವ್ ಮಾಡಿಕೊಂಡು ಬೇರೆಲ್ಲಿಗೋ ಹೋಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದವು. ಹಾಗಾಗಿ, ಅತ್ತ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಮೂರು ದಿನಗಳ ಹಿಂದೆ, ಸ್ವಾಮೀಜಿಯವರ ಖಾಸಗಿ ಡ್ರೈವರ್ ಲಿಂಗರಾಜುನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ, ಸ್ವಾಮೀಜಿಯವರು ತಾವೇ ಖುದ್ದಾಗಿ ಕಾರು ಚಲಾಯಿಸಿಕೊಂಡು ಮೈಸೂರಿಗೆ ಹೋಗಿದ್ದಾರಿಯೂ, ಅಲ್ಲಿ ಕಾರಿನ ನಂಬರ್ ಪ್ಲೇಟ್ ಗಳನ್ನು ಕಳಚಿಟ್ಟು ಅಲ್ಲಿಂದ ಹೈದರಾಬಾದ್ ಗೆ ತೆರಳಿದ್ದಾಗಿಯೂ ತಿಳಿದುಬಂದಿತ್ತು. ಹಾಗಾಗಿ, ಸಿಸಿಬಿ ಪೊಲೀಸರ ತಂಡವೊಂದು ಹೈದರಾಬಾದ್ ತೆರಳಿತ್ತು.
ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧ್‌ಗಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಹಿಡಿದಿದ್ದಾರೆ.
ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಇಂದು (ಸೆಪ್ಟೆಂಬರ್ 19) ರಾತ್ರಿ ಬೆಂಗಳೂರಿಗೆ ಕರೆತರಲಿದ್ದಾರೆ.

