ಬಂಟಕಲ್ಲು: ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಅವಹೇಳನ: ಪ್ರತಿಭಟಿಸಿದ ಪತ್ರಕರ್ತರು
(Bantakal) ಬಂಟಕಲ್ : ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಆಂಡ್ ಮೆನೇಜ್ಮೆಂಟ್ ಕಾಲೇಜಿನಲ್ಲಿ (Shree Madhva Vadiraja Institute Bantakal) ಕ.ಸಾ.ಪ ವತಿಯಿಂದ ನಡೆದ ಕಾಪು ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಸಪಾ ಪದಾಧಿಕಾರಿಯೊಬ್ಬರು ಮಾಧ್ಯಮವನ್ನು ಅವಹೇಳನ ಮಾಡಿದ್ದು, ಅದನ್ನು ವರದಿಗಾರಿಕೆಗೆ ಆಗಮಿಸಿದ್ದ ಪತ್ರಕರ್ತರು ಪ್ರತಿಭಟಿಸಿರುವ ಘಟನೆ ನಡೆದಿದೆ.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕ.ಸಾ.ಪ. ಕಾಪು ತಾಲೂಕು ಸಮಿತಿಯ ಪದಾಧಿಕಾರಿ ನೀಲಾನಂದ ನಾಯಕ್ (Neelananda Naik), ಕನ್ನಡ ದಿನಪತ್ರಿಕೆ, ಟಿವಿ ಮಾಧ್ಯಮಗಳು ಕನ್ನಡ ಪದಗಳನ್ನು ಸರಿಯಾಗಿ ಬಳಸುತ್ತಿಲ್ಲ. ಪತ್ರಿಕೆಗಳಲ್ಲಿ ಸಾಕಷ್ಟು ತಪ್ಪು ಪದ ಬಳಕೆಯಾಗುತ್ತಿದೆ ಎಂಬರ್ಥದಲ್ಲಿ ಪದೇ ಪದೇ ಪುನರುಚ್ಚರಿಸಿದ್ದು, ಇದು ಪತ್ರಕರ್ತರ ಅಸಮಾಧಾನಕ್ಕೆ ಕಾರಣವಾಯಿತು.
ಇದನ್ನು ಪ್ರತಿಭಟಿಸಿದ ಪತ್ರಕರ್ತರು ಅವರನ್ನು ಬದಿಗೆ ಕರೆದು ಅಧ್ಯಕ್ಷ ಪುಂಡಲೀಕ ಮರಾಠೆಯವರ (Pundalika Marate) ಸಮ್ಮುಖ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗಾಗಿ ನಡೆಸುವ ಕಾರ್ಯಕ್ರಮದಲ್ಲಿ ಮಾಧ್ಯಮದ ಬಗ್ಗೆ ಆಸಕ್ತಿ ಮೂಡಿಸುವಂತಿರ ಬೇಕೇ ಹೊರತು, ಮಾಧ್ಯಮವನ್ನು ಅವಹೇಳನ ಮಾಡುವ ಮೂಲಕ ಓದಿನಿಂದ ವಿಮುಖವಾಗುತ್ತಿರುವ ಯುವ ಜನಾಂಗದಲ್ಲಿ ಮತ್ತಷ್ಟು ನಿರುತ್ಸಾಹ ಮೂಡಿಸುವಂತಿರಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಅವರು ತಮ್ಮ ಅಚಾತುರ್ಯವನ್ನು ಒಪ್ಪಿಕೊಂಡಿದ್ದು ಕ್ಷಮೆ ಯಾಚಿಸಿದ್ದಾರೆ.

