ಉಡುಪಿ : ಕಿದಿಯೂರು ಹೊಟೇಲ್‌ನ ಶ್ರೀ ನಾಗ ಸಾನ್ನಿಧ್ಯದಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ
(Udupi)ಉಡುಪಿ: ಕಿದಿಯೂರು ಹೊಟೇಲ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಶ್ರೀನಾಗಸಾನ್ನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ವಿವಿಧ ಹೋಮ ಹವನಾದಿಗಳು ನಡೆದು ಅಷ್ಟೋತ್ತರ ಶತಕಲಶಾಭಿಷೇಕ ಸಹಿತ ಬ್ರಹ್ಮಕುಂಭಾಭಿಷೇಕ, ಮಹಾ ಪೂಜೆ, ಹಾಲಿಟ್ಟು ಸೇವೆ, ಗಂಗಾರತಿ ಯ ಅನಂತರ ಅಷ್ಟಪವಿತ್ರ ನಾಗಮಂಡಲೋತ್ಸವ ನೆರವೇರಿತು.
ಕಿದಿಯೂರು ಹೊಟೇಲ್ಸ್‌ನ ಎಂಡಿ ಭುವನೇಂದ್ರ ಕಿದಿಯೂರು (Bhuvnendra Kediyuru) ಅವರ ಸೇವಾರ್ಥ ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ (Nadoja Dr G Shankar) ನೇತೃತ್ವದಲ್ಲಿ ಜೋತಿಷ ವಿದ್ವಾನ್ ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ (Kabiyadi Jayarama Acharya) ಅವರ ಮಾರ್ಗದರ್ಶನದಲ್ಲಿ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆ ನಡೆಯಿತು. ಈ ಅಪರೂಪದ ಅಷ್ಟಪವಿತ್ರ ನಾಗಮಂಡಲೋತ್ಸವದಲ್ಲಿ ಉಡುಪಿ ಮಾತ್ರವಲ್ಲದೆ ಆಸುಪಾಸಿನ ಊರಿನ ಸಾವಿರಾರು ಭಕ್ತರು ಭಾಗಿಯಾದರು
