ಅಂಗನವಾಡಿ ಶಿಕ್ಷಕಿ ಶಶಿಕಲಾ ನವೀನ್ ರವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು ನಾಗರಬಾವಿ ಕಲಾ ಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆದ ಕಾರ್ಯಕ್ರಮ
(Yermalu) ಎರ್ಮಾಳು: ಕಲಾಭೂಮಿ ಪ್ರತಿಷ್ಠಾನ (ರಿ). ಬೆಂಗಳೂರು ಪ್ರತಿವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಲಾಭೂಮಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ವರ್ಷ ಶೈಕ್ಷಣಿಕ ಕ್ಷೇತ್ರದಲ್ಲಿ ಬಡಾ ಎರ್ಮಾಳಿನ ಹಿರಿಯ ಅಂಗನವಾಡಿ ಶಿಕ್ಷಕಿ ಶಶಿಕಲಾ ನವೀನ್ ರವರಿಗೆಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ಪ್ರತಿವರ್ಷದಂತೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ-2026 ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದ ಮತ್ತು ಸಮಾಜಸೇವೆ ಈ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡುವ ಕಾಯಕ ನಡೆಸಿಕೊಂಡು ಬಂದಿದೆ.
ಕರ್ನಾಟಕ ರಾಜ್ಯ ಡಿಜಿಟಲ್ ಮಿಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರಿನ ನಾಗರಬಾವಿ ಕಲಾ ಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಡಾ ಎರ್ಮಾಳಿನ ಹಿರಿಯ ಅಂಗನವಾಡಿ ಶಿಕ್ಷಕಿ ಶಶಿಕಲಾ ನವೀನ್ ರವರಿಗೆಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾಭೂಮಿ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಆಸ್ಕರ್ ಕೃಷ್ಣ, ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ರಂಗಕರ್ಮಿ ಕಲಾವಿದೆ ಗೀತಾ ಮೌಂಟಡ್ಕ, ಗೋ ರಕ್ಷಕ ಮಹೇಂದ್ರ ಮನೋಥ್, ಮಿಮಿಕ್ರಿ ಗೋಪಿ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್, ಸಾಮಾಜಿಕ ಹೋರಾಟಗಾರ ಶ್ರೀಧರ್ ಕುಪ್ಪರು ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.

