ಇಂದಿರಾ ಕ್ಯಾಂಟೀನ್ ವಿಚಾರಕ್ಕೂ, ಚೈತ್ರಾ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ: ಗೋವಿಂದ ಬಾಬು ಪೂಜಾರಿ
ಬೆಂಗಳೂರು: ಇಂದಿರಾ ಕ್ಯಾಂಟಿನಿಗೂ, ಚೈತ್ರಾ ಕುಂದಾಪುರ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅದು ನನ್ನ ಬಿಸಿನೆಸ್, ಇದು ನನಗೆ ಆಗಿರುವ ವಂಚನೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಸಿಸಿಬಿ ಕಚೇರಿ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಇಂದಿರಾ ಕ್ಯಾಂಟೀನ್ಗೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅದು ನನ್ನ ಬಿಸಿನೆಸ್, ಇದು ನನಗೆ ಆಗಿರುವ ವಂಚನೆ ಎಂದು ಹೇಳಿದ್ದಾರೆ. ಸಿಸಿಬಿ ಅಧಿಕಾರಿಗಳು ಕರೆದಿದ್ದಕ್ಕೆ ವಿಚಾರಣೆಗೆ ಆಗಮಿಸಿದ್ದೇನೆ. ದೂರಿನಲ್ಲಿ ಯಾರೆಲ್ಲಾ ಇದ್ದಾರೋ ಅವರನ್ನೆಲ್ಲಾ ಭೇಟಿಯಾಗಿದ್ದೇನೆ. ವಂಚನೆ ಸಂಬಂಧ ಎಲ್ಲಾ ಮಾಹಿತಿ ನೀಡಿದ್ದೇನೆ. ವಿಚಾರಣೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳ ವಿಚಾರಣೆ ಮುಗಿಸಿಕೊಂಡು ಮತ್ತೆ ಮಾತನಾಡುತ್ತೇನೆ ಎಂದರು.
‘ನಾನು ಉದ್ಯಮಿ, ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನನಗೆ ಯಾವುದೇ ರೀತಿಯಲ್ಲೂ ಸಂಶಯ ಬರದಂತೆ ನಂಬಿಸಿದ್ದರು. ನಾನು ಉದ್ಯಮ ಕ್ಷೇತ್ರ, ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
‘ಸಿಸಿಬಿ ಅಧಿಕಾರಿಗಳು ಏನೆಲ್ಲ ಕೇಳಿದ್ದಾರೋ ಅದನ್ನೆಲ್ಲ ಕೊಟ್ಟಿದ್ದೇನೆ. ಪೆನ್ಡ್ರೈವ್ನಲ್ಲಿ ಸಿಸಿಬಿ ಪೊಲೀಸರಿಗೆ ದಾಖಲೆಗಳನ್ನು ಕೊಟ್ಟಿದ್ದೇನೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಾಗಿ ಹೇಳುವುದಿಲ್ಲ. ನನ್ನ ಬಳಿ ಹಣ ಹಿಂದಿರುಗಿಸುವುದಾಗಿ ಸಮಯ ತೆಗೆದುಕೊಂಡಿದ್ದ ಆರೋಪಿಗಳು, ಹಣ ಕೊಡುವುದು ಲೇಟ್ ಆಗಿದ್ದರಿಂದ ನಾನು ಪೊಲೀಸರಿಗೆ ದೂರು ನೀಡಿದ್ದು, ನನಗೆ ಮೋಸ ಮಾಡಿದಂತೆ ಬೇರೆಯವರಿಗೆ ಆಗಬಾರದೆಂದು ದೂರು ನೀಡಿದ್ದೇನೆ ಎಂದು ಸಿಸಿಬಿ ವಿಚಾರಣೆ ನಂತರ ಉದ್ಯಮಿ ಗೋವಿಂದಬಾಬು ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಬಾಕಿ ಬಿಲ್ ಷಡ್ಯಂತ್ರ: ಚೈತ್ರಾ ಕುಂದಾಪುರ ಆರೋಪಕ್ಕೆ ತುಷಾರ್ ಗಿರಿನಾಥ್ ಸ್ಪಷ್ಟನೆ
ಇಂದಿರಾ ಕ್ಯಾಂಟೀನ್ ಬಿಲ್ ಪೆಂಡಿಂಗ್ ಇದೆ. ಅದಕ್ಕಾಗಿ ಈ ಷಡ್ಯಂತ್ರ ಮಾಡಿದ್ದಾರೆ ಎಂಬ ಚೈತ್ರಾ ಕುಂದಾಪುರ ಆರೋಪಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದು, ಇಂದಿರಾ ಕ್ಯಾಂಟೀನ್ ಬಹುತೇಕ ಬಿಲ್ ಕ್ಲಿಯರ್ ಮಾಡಲಾಗಿದೆ. ಕೆಲವು ಸಣ್ಣಪುಟ್ಟ ಬಿಲ್ ಬಾಕಿ ಉಳಿಸಿಕೊಂಡಿರಬೇಕು. ಗುತ್ತಿಗೆದಾರರಿಗೆ ಯಾವುದೇ ರೀತಿಯ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದಿದ್ದಾರೆ.

