ಇಂದು ಉಡುಪಿಯಲ್ಲಿ ಕೃಷ್ಣಜನ್ಮಾಷ್ಟಮಿ: ದ್ವಾರಕೆಯಂತೆ ಕಂಗೊಳಿಸುತ್ತಿರುವ ಕೃಷ್ಣ ಮಠ
ಉಡುಪಿ: ಉಡುಪಿಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ.

ದ್ವಾರಕೆಯಿಂದ ಬಂದ ಕೃಷ್ಣ ಎಂಟು ಶತಮಾನದ ಹಿಂದೆ ಉಡುಪಿಯ ಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಇಂದು ಶ್ರೀಕೃಷ್ಣನ ಬಾಲರೂಪದಲ್ಲಿ ಪೂಜಿಸಲಾಗುತ್ತಿದೆ.
ಬೆಳಗ್ಗಿನಿಂದಲೇ ಸಾವಿರಾರು ಮಂದಿ ಬಂದು ಕೃಷ್ಣದೇವರ ದರ್ಶನ ಕೈಗೊಳ್ಳುತ್ತಿದ್ದಾರೆ. ಇಂದು ಹಗಲಿಡಿ ಉಪವಾಸ ಇರುವ ಕೃಷ್ಣ ಭಕ್ತರು, ನಿರಂತರ ಪೂಜೆ ಭಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಧ್ಯರಾತ್ರಿ 11:42ಕ್ಕೆ ಕೃಷ್ಣದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ.
ಅರ್ಗ್ಯಪ್ರದಾನದ ವೇಳೆ ದೇವರಿಗೆ ಅರ್ಪಿಸಲು, ಸ್ವತಹ ಸ್ವಾಮೀಜಿಗಳೇ ಉಂಡೆ ಚಕ್ಕುಲಿ ತಯಾರಿಸುತ್ತಾರೆ.
ಕೃಷ್ಣ ಮಠವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ರಥ ಬೀದಿಯ ತುಂಬಾ ಮುದ್ದುಕೃಷ್ಣರ ಕಲರವ ಮೇಳೈಯಿಸಿದೆ. ಸಾವಿರಾರು ಮಕ್ಕಳು ಮುದ್ದು ಕೃಷ್ಣನ ವೇಷ ಧರಿಸಿ ಕೃಷ್ಣಮಠದ ಪರಿಸರಕ್ಕೆ ಬರುತ್ತಿದ್ದಾರೆ.
ಮಠದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಗಳು ನಡೆದರೆ, ನಾಳೆ ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ವಿಟ್ಲಪಿಂಡಿ ಮಹೋತ್ಸವ ಜರುಗಲಿದೆ.

