ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಶಿಸ್ತುಬದ್ಧ ಉಚ್ಚಿಲ ದಸರಾ-೨೦೨೩ಕ್ಕೆ ಸಿದ್ಧತೆ
ಉಡುಪಿ\ಉಚ್ಚಿಲ: ಕರ್ನಾಟಕದ ಕೊಲ್ಹಾಪುರ ಎಂದು ಲೋಕ ಪ್ರಸಿದ್ಧಿಗೊಂಡಿರುವ ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಹೃದಯಿ ಭಕ್ತರ ಸಹಕಾರ-ಸಹಯೋಗದಿಂದ ಈ ಬಾರಿಯೂ ನವರಾತ್ರಿ ಉತ್ಸವವನ್ನು ಉಚ್ಚಿಲ ದಸರಾ ಉತ್ಸವ-೨೦೨೩ ಆಚರಿಸಲು ಶ್ರೀ ಕ್ಷೇತ್ರದ ಆಡಳಿತ ಸಮಿತಿ ಮತ್ತು ಕ್ಷೇತ್ರದ ಭಕ್ತಾಭಿಮಾನಿ ಬಳಗ ನಿರ್ಧರಿಸಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಅಚ್ಚುಕಟ್ಟು ಹಾಗೂ ಶಿಸ್ತುಬದ್ಧವಾಗಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ದೇವಳದ ಸಮಗ್ರ ಜೀರ್ಣೋದ್ಧಾರದ ರೂವಾರಿ ಹಾಗೂ ಮೊಗವೀರ ಸಮಾಜದ ಮುಂದಾಳು ನಾಡೋಜ ಡಾ. ಜಿ. ಶಂಕರ್ ತಿಳಿಸಿದ್ದಾರೆ.
ಸೋಮವಾರ ಸಂಜೆ ಉಚ್ಚಿಲದ ಮೊಗವೀರ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಉತ್ಸವದ ಸಮಗ್ರ ಮಾಹಿತಿ ನೀಡಿದರು.
ದೇವಸ್ಥಾನದ ಪಕ್ಕದಲ್ಲಿರುವ ಸುಸಜ್ಜಿತ ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅಕ್ಟೋಬರ್ ೧೫ ರಿಂದ ಅ.೨೪ ರವರೆಗೆ ಪೂಜಿಸಲಾಗುವುದು.
ನವದುರ್ಗೆಯರು ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆ: ಅ.೧೫ರ ಬೆಳಿಗ್ಗೆ ೯.೩೦ಕ್ಕೆ ಉಚ್ಚಿಲ ದಸರಾ -೨೦೨೩ ನವದುರ್ಗೆಯರು ಮತ್ತು ಶಾರದಾ ದೇವಿಯರ ಪ್ರತಿಷ್ಠಾಪನೆಯು ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ನೆರವೇರಲಿದೆ. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯವರು ಉಚ್ಚಿಲ ದಸರಾ-೨೦೨೩ವನ್ನು ಅ. ೧೫ರ ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟಿಸಲಿದ್ದಾರೆ.
ಮಹಾಲಕ್ಷ್ಮೀ ಅನ್ನಛತ್ರ ಕಟ್ಟಡ ಹಾಗೂ ಅತಿಥಿಗೃಹ ಉದ್ಘಾಟನೆ : ಅ.೧೫ ಬೆಳಿಗ್ಗೆ ೧೦.೧೫ ಗಂಟೆಗೆ ಮಹಾಲಕ್ಷ್ಮೀ ಅನ್ನಛತ್ರ ಕಟ್ಟಡ ಹಾಗೂ ಅತಿಥಿಗೃಹ ಉದ್ಘಾಟನೆ ನಡೆಯಲಿದೆ.
ಶ್ರೀಕ್ಷೇತ್ರಕ್ಕೆ ಊರು ಪರವೂರಿನಿಂದ ಆಗಮಿಸುವ ಭಕ್ತಾಭಿಮಾನಿಗಳ ಅನುಕೂಲಕ್ಕಾಗಿ ಹಾಗೂ ಪ್ರತಿದಿನ ಮಧ್ಯಾಹ್ನ ನಿತ್ಯ ಅನ್ನದಾನದ ಸೇವೆಗೆ ಸಭಾಂಗಣದಲ್ಲಿ ಉಂಟಾದ ಸ್ಥಳದ ಅಭಾವದ ಸಮಸ್ಯೆಯನ್ನು ಮನಗಂಡು ಸುಮಾರು ರೂ. ೪ ಕೋಟಿ ವೆಚ್ಚದ ೨ ಅಂತಸ್ತಿನ ಅನ್ನಛತ್ರದ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ನೆಲಮಹಡಿಯಲ್ಲಿ ಅನ್ನದಾನ ಸೇವೆಯನ್ನು ಕಳೆದ ರಥೋತ್ಸವ ಸಂದರ್ಭದಲ್ಲಿ ಪ್ರಾರಂಭಿಸಲಾಗಿದ್ದು, ನಂತರ ನಿರ್ಮಾಣವಾದ ಒಂದನೇ ಮಹಡಿಯಲ್ಲಿ ನಿರ್ಮಿಸಲಾದ ನೂತನ ಅನ್ನಛತ್ರ ಹಾಗೂ ೨ನೇ ಮಹಡಿಯಲ್ಲಿ ದಾನಿಗಳ ಸಹಕಾರದಿಂದ ಒಟ್ಟು ೨೭ ಸುಸಜ್ಜಿತ ಅತಿಥಿಗೃಹ ನಿರ್ಮಿಸಲಾಗಿದೆ.
ವಿವಿಧ ಮೇಳ ಹಾಗೂ ಪ್ರದರ್ಶನಗಳ ಉಧ್ಘಾಟನೆ: ಅದೇ ದಿನ ಬೆಳಿಗ್ಗೆ ೧೦.೩೦ ಗಂಟೆಗೆ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನಗಳ ಉದ್ಘಾಟನೆ ನೆರವೇರಲಿದೆ.
ಯುವ ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ: ಸಂಜೆ ೬.೧೫ ಗಂಟೆಗೆ ಯುವ ದಸರಾ ಹಾಗೂ ೧೦ ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಂಜೆ ೬.೧೫ರಿಂದ ೭.೦೦ ಗಂಟೆಯವರೆಗೆ ನಡೆಯಲಿದೆ. ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರುಗಳು, ಲೋಕಸಭಾ ಸದಸ್ಯರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳ್ಳಿ ಕಿರೀಟ, ಚಿನ್ನದ ಬೂತಾಯಿ ಮೀನಿನ ಸರ, ಬೆಳ್ಳಿ ತಂಬೂರಿ ಸಮರ್ಪಣೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು: ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪ್ರತೀದಿನ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಚಂಡಿಕಾಹೋಮ, ಪ್ರತೀದಿನ ಅಪರಾಹ್ನ ೧೨.೩೦ರಿಂದ ೩ ಗಂಟೆಯವರೆಗೆ ಅನ್ನಸಂತರ್ಪಣೆ ಹಾಗೂ ಸಂಜೆ ೭ ಗಂಟೆಯಿಂದ ಆಗಮಿಸುವ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ, ಪ್ರತೀದಿನ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಪ್ರತೀದಿನ ಸಂಜೆ ೫.೩೦ರಿಂದ ೬.೧೫ ಗಂಟೆಯವರೆಗೆ ಸಹಸ್ರ ಸುಮಂಗಲೆಯವರಿಂದ ಸಾಮೂಹಿಕ ಕುಂಕುಮಾರ್ಚನೆ, ಪ್ರತೀದಿನ ಸಂಜೆ ೬.೧೫ರಿಂದ ೭.೦೦ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತೀದಿನ ರಾತ್ರಿ ೭ರಿಂದ ೧೦.೩೦ರವರೆಗೆ ವಿವಿಧ ಮನೋರಂಜನಾ ಕಾರ್ಯಕ್ರಮ, ಕಾಂತಾರ ಸಿನೆಮಾ ಸಂಗೀತೋತ್ಸವ, ಪ್ರತೀದಿನ ನವದುರ್ಗೆಯರು ಮತ್ತು ಶ್ರೀ ಶಾರದಾದೇವಿಗೆ ತ್ರಿಕಾಲಪೂಜೆ ನಡೆಯಲಿದೆ.
೧೦ ದಿನಗಳ ಕಾಲವೂ ಪಡುಬಿದ್ರಿಯಿಂದ ಕಾಪು ದೀಪಸ್ತಂಭದವರೆಗೆ ಭವ್ಯವಾದ ವಿದ್ಯುದ್ದೀಪಾಲಂಕಾರ ಕಲ್ಪಿಸಲಾಗಿದೆ.
ಅ.೧೯ ಲಲಿತ ಪಂಚಮಿಯಂದು ಅಪರಾಹ್ನ ೪.೩೦ರಿಂದ ೫.೩೦ರವರೆಗೆ ವಿ. ಪವನ ಬಿ. ಆಚಾರ್ ಬಳಗದವರಿಂದ ಶತವೀಣಾವಲ್ಲರಿ-ಏಕಕಾಲದಲ್ಲಿ ೧೫೧ ವೀಣೆಗಳ ವಾದನ ನಡೆಯಲಿದೆ.
ದಸರಾ ಪ್ರಯುಕ್ತ ನಡೆಯುವ ವಿವಿಧ ಸ್ಪರ್ಧೆಗಳು: ಅ.೧೫ರಂದು ಸಾರ್ವಜನಿಕರಿಗೆ ನೃತ್ಯ ಸ್ಪರ್ಧೆ, ಅ.೨೦ರಂದು ಮುದ್ದು ಮಕ್ಕಳಿಂದ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಅ.೨೧ರಂದು ಮಹಿಳೆಯರಿಗೆ(ಸಾಂಪ್ರದಾಯಿಕ) ಮತ್ತು ಪುರುಷರಿಗೆ(ಐಚ್ಛಿಕ) ರಂಗೋಲಿ ಸ್ಪರ್ಧೆ ಮತ್ತು ಮಹಿಳೆಯರ ಹುಲಿ ವೇಷ ಸ್ಪರ್ಧೆ, ಅ.೨೨ರಂದು ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ವರ್ಷದ ವಿಶೇಷ ಆಕರ್ಷಣೆ : ಪುಸ್ತಕಮೇಳ, ಫಲಪುಷ್ಪ ಪ್ರದರ್ಶನ, ಮೀನುಗಾರಿಕಾ ಮಾಹಿತಿ ಹಾಗೂ ಪರಿಕರಗಳ ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್, ಅಂಬಾರಿ ಹೊತ್ತ ಆನೆ, ರಾಜಸ್ಥಾನದ ದಾಂಡಿಯಾ ನೃತ್ಯಗಳು ಈ ಬಾರಿಯ ಉಚ್ಚಿಲ ದಸರಾ ಮಹೋತ್ಸವದ ವಿಶೇಷತೆಗಳು.
ಶೋಭಾಯಾತ್ರೆ ಸಾಗುವ ಮಾರ್ಗ: (ಶೋಭಾಯಾತ್ರೆ ಕ್ರಮಿಸುವ ಒಟ್ಟು ದೂರ ೧೦ಕಿ.ಮೀ) ರಾಷ್ಟ್ರೀಯ ಹೆದ್ದಾರಿ-೬೬ರ ಮೂಲಕ ಶೋಭಾಯಾತ್ರೆಯು ಕಾಲ್ನಡಿಗೆಯ ಮೂಲಕ ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಟು ಎರ್ಮಾಳು ಶ್ರೀ ಜನಾರ್ಧನ ದೇವಳವರೆಗೆ ಸಾಗಿ ಅಲ್ಲಿನ ಡಿವೈಡರ್ ಬಳಿಯಿಂದ ವಾಪಾಸು ಪುನಃ ರಾಷ್ಟ್ರೀಯ ಹೆದ್ದಾರಿ-೬೬ರ ಮೂಲಕ ಸಾಗಿ ಎರ್ಮಾಳ್-ಉಚ್ಚಿಲ-ಮೂಳೂರು-ಕೊಪ್ಪಲಂಗಡಿಯಿಂದ ಕಾಪು ದೀಪಸ್ತಂಭದ ಬಳಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುವುದು.
ಶೋಭಾಯಾತ್ರೆಯಲ್ಲಿ ೫೦ಕ್ಕೂ ಅಧಿಕ ವಿಶೇಷವಾದ ಟ್ಯಾಬ್ಲೋಗಳು, ದಶ ವಿಗ್ರಹಗಳನ್ನೊಳಗೊಂಡ ೧೦ ವಿಶೇಷ ಟ್ಯಾಬ್ಲೋಗಳು ಭಕ್ತರ ಮನಸೂರೆಗೊಳ್ಳಲಿದೆ. ವಿವಿಧ ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಹುಲಿವೇಷಗಳ ಟ್ಯಾಬ್ಲೋ ಸೇರಿದಂತೆ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದೆ. ವಿಸರ್ಜನಾ ಸಮಯದಲ್ಲಿ ಕಾಪು ಸಮುದ್ರ ಕಿನಾರೆಯಲ್ಲಿ ಸುಡುಮದ್ದು ಪ್ರದರ್ಶನ, ಸಮುದ್ರದ ಮಧ್ಯದಲ್ಲಿ ಬೋಟ್‌ಗಳಲ್ಲಿ ವಿಶೇಷವಾದ ವಿದ್ಯುತ್ ದೀಪಾಲಂಕಾರ, ೧೦,೦೦೦ಕ್ಕೂ ಅಧಿಕ ಮಹಿಳೆಯರಿಂದ ಸಾಮೂಹಿಕ ಮಹಾಮಂಗಳಾರತಿ, ಗಂಗಾರತಿ, ಬಳಿಕ ಭಕ್ತ ಸಮೂಹದ ಜಯಘೋಷಣೆಗಳ ನಡುವೆ ವಿಸರ್ಜನೆ ನಡೆಯಲಿದೆ.
ಬೃಹತ್ ಗಂಗಾರತಿ: ಕಾಶಿಯಲ್ಲಿ ಗಂಗಾ ನದಿಯ ತಟದಲ್ಲಿ ಗಂಗಾ ಮಾತೆಗೆ ಬೃಹತ್ ಗಂಗಾರತಿ ಬೆಳಗುವ ಅರ್ಚಕರೇ ಸ್ವಯಂ ಇಲ್ಲಿಗೆ ಆಗಮಿಸಿ ನವದುರ್ಗೆಯರಿಗೆ ಹಾಗೂ ಶಾರದಾ ದೇವಿಗೆ ಗಂಗಾರತಿ ಬೆಳಗಿಸಲಾಗುವುದು ಈ ಬಾರಿಯ ವಿಶೇಷವಾಗಿದೆ.
ಗಂಗಾರತಿ ಬೆಳಗುವ ದಿನಾಂಕ ಮತ್ತು ಸಮಯ: ಅ.೨೩ರ ಸಂಜೆ ೭.೩೦ಕ್ಕೆ ದಸರಾ ಮಂಟಪದಲ್ಲಿ, ಅ.೨೪ ರಾತ್ರಿ ೧೦.೩೦ಕ್ಕೆ ಕಾಪು ದೀಪಸ್ತಂಭದ ಬಳಿ ವಿಸರ್ಜನೆ ಸಂದರ್ಭದಲ್ಲಿ ನವದುರ್ಗೆಯರಿಗೆ ಹಾಗೂ ಶಾರದಾ ದೇವಿಗೆ ಗಂಗಾರತಿ ಬೆಳಗಿಸಲಾಗುವುದು ಎಂದು ನಾಡೋಜ ಡಾ. ಜಿ. ಶಂಕರ್ ತಿಳಿಸಿದ್ದಾರೆ.
ಶೋಭಾಯಾತ್ರೆಯಲ್ಲಿ ಸಾಮಾಜಿಕ ಪರಿಕಲ್ಪನೆಯ ೪ ಲೈವ್ ಟ್ಯಾಬ್ಲೋಗಳು, ಸ್ವಚ್ಛತಾ ಟ್ಯಾಬ್ಲೋ, ಅನೆ ಅಂಬಾರಿಯಲ್ಲಿ ಮೂರ್ತಿ ಕೂರಿಸಿ ಜಲಸ್ಥಂಭನ ವಿಶೇಷ ಅಕರ್ಷಣೆಯಾಗಿದ್ದು, ವಿಸರ್ಜನೆಯು ರಾತ್ರಿ ೧೧ ಗಂಟೆಯೊಳಗೆ ಮುಗಿಸಲು ಸಿದ್ಧತೆ ನಡೆಸಲಾಗಿದೆ. ಈ ಬಾರಿ ದುಂದು ವೆಚ್ಚ ಮಾಡದೆ ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಿನ ದಸರಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.
ಕಳೆದ ಬಾರಿ ನಮ್ಮ ಮನವಿಗೆ ಸ್ಪಂದಿಸಿ ಶೋಭಾಯಾತ್ರೆ ಸಾಗುವ ಮಾರ್ಗದ ಎಲ್ಲಾ ಅಂಗಡಿಗಳು, ಮಳಿಗೆಗಳು ಮತ್ತು ಮನೆಯವರು ಜಾತಿ, ಮತ, ಧರ್ಮ ಬೇಧಭಾವವಿಲ್ಲದೆ ತಳಿರು ತೋರಣ ಶೃಂಗರಿಸಿ ವಿದ್ಯುದ್ದೀಪಾಲಂಕಾರ ಮಾಡಿದ್ದು, ಶೋಭಾಯಾತ್ರೆಗೆ ಹೆಚ್ಚಿನ ಮೆರಗನ್ನು ನೀಡಿದೆ. ಅದರಂತೆ ಈ ಬಾರಿಯೂ ಕೂಡ ತಮ್ಮ ತಮ್ಮ ಅಂಗಡಿಗಳು, ಮಳಿಗೆಗಳು ಹಾಗೂ ಮನೆಗಳಿಗೆ ತಳಿರು-ತೋರಣಗಳಿಂದ ಶೃಂಗರಿಸಿ ವಿದುದ್ದೀಪಾಲಂಕಾರ ಮಾಡುವಂತೆ ಮತ್ತು ಎಲ್ಲಾ ಭಕ್ತರು ೧೦ ದಿನಗಳ ಕಾಲ ನಡೆಯುವ ಈ ಉಚ್ಚಿಲ ದಸರಾ ಉತ್ಸವದಲ್ಲಿ ಪಾಲ್ಗೊಂಡು ಸರ್ವ ರೀತಿಯ ಸಹಕಾರ ನೀಡಿ ದಸರಾ ಉತ್ಸವವನ್ನು ಯಶಸ್ವಿಗೊಳಿಸುವಂತೆ ಡಾ. ಜಿ. ಶಂಕರ್ ವಿನಂತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಸುಭಾಷ್ಚಂದ್ರ ಮೆಂಡನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ.ಅಮೀನ್, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ, ವಿವಿಧ ಪದಾಧಿಕಾರಿಗಳಾದ ಮನೋಜ್ ಕಾಂಚನ್, ಸುಗುಣ ಕರ್ಕೇರ, ಶಂಕರ ಸಾಲ್ಯಾನ್, ಸತೀಶ್ ಅಮೀನ್ ಬಾರ್ಕೂರು, ಮೋಹನ್ ಬೇಂಗ್ರೆ, ಅನಿಲ್ ಕುಮಾರ್, ಸಂಜೀವ ಮೆಂಡನ್, ದಿನೇಶ್, ರವೀಂದ್ರ ಶ್ರೀಯಾನ್, ದೇವಳದ ಮುಖ್ಯ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.
