ಉಡುಪಿ ಜನ್ಮಾಷ್ಟಮಿ ಸಂಭ್ರಮ ಭಕ್ತಿ, ಶ್ರದ್ದೆಯ ಕೃಷ್ಣಾಷ್ಠಮಿ
ಪರ್ಯಾಯ ಶಿರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಅರ್ಘ್ಯ ಪ್ರಧಾನ
(Udupi) ಉಡುಪಿ : ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಮೇರೆ ಮೀರಿದ್ದು, ಸಿಂಹ ಮಾಸ ಕೃಷ್ಣ ಪಕ್ಷ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರದ ಶುಭಗಳಿಗೆಯಲ್ಲಿ ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಶ್ರೀಕೃಷ್ಣನಿಗೆ ಶುಕ್ರವಾರ ರಾತ್ರಿ ಭಕ್ತಿ, ಶ್ರದ್ದೆಯಿಂದ ಅರ್ಥ್ಯ ಪ್ರದಾನ ನೆರವೇರಿತು.
ಪರ್ಯಾಯ ಶಿರೂರು ಶ್ರೀವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ರಾತ್ರಿ ಮಹಾಪೂಜೆ ಬಳಿಕ ರಾತ್ರಿ 12.15ರ ಚಂದ್ರೋದಯ ಕಾಲದಲ್ಲಿ ಪೂಜೆ, ನವ ಬಗೆಯ ಉಂಡೆ ಚಕ್ಕುಲಿ ಸಹಿತ ನೈವೇದ್ಯ ಅರ್ಪಿಸಿದರು. ಸಮಸ್ತ ಲೋಕಕ್ಕೆ ಒಳಿತು ಮಾಡುವಂತೆ ಪ್ರಾರ್ಥಿಸಿ ಅರ್ಘ್ಯ ನೀಡಿದರು.
ತೀರ್ಥಮಂಟಪದ ಅಲಂಕೃತ ತುಳಸಿಕಟ್ಟೆಯಲ್ಲಿ ಚಂದ್ರನಿಗೆ ಕ್ಷೀರಾರ್ಘ್ಯ ತೆಂಗಿನ ಕಾಯಿ ಹೋಳಿನಲ್ಲಿ ಸಮರ್ಪಿಸಲಾಯಿತು. ಯತಿಗಳು, ಭಕ್ತರು ದಿನವಿಡೀ ನಿರ್ಜಲ ಉಪವಾಸ ಕೈಗೊಂಡಿದ್ದು, ಮಿಂದು ಸರತಿಯಲ್ಲಿ ಬಂದು ಶ್ರೀಕೃಷ್ಣನಿಗೆ ಭಕ್ತಿ, ಶ್ರದ್ದೆಯಿಂದ ಅರ್ಘ್ಯ ಪ್ರದಾನಿಸಿದರು.
ಜಗದೊಡೆಯನ ಜನ್ಮಾಷ್ಟಮಿ ಅಂಗವಾಗಿ ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶಿರೂರು ಶ್ರೀವೇದವರ್ಧನತೀರ್ಥ ಶ್ರೀಪಾದರಿಂದ ಶುಕ್ರವಾರ ಮಹಾಪೂಜೆ ನಡೆಯಿತು.

