

ಉಡುಪಿ : ನಟ ರಾಕೇಶ್ ಪೂಜಾರಿಗೆ ಅಂತಿಮ ನಮನ: ನಟರು, ಅಭಿಮಾನಿಗಳಿಂದ ಕಂಬನಿ
(Udupi) ಉಡುಪಿ: ಭಾನುವಾರ ರಾತ್ರಿ ಕಾರ್ಕಳದ ಮನೆಯೊಂದರಲ್ಲಿ ಮೆಹೆಂದಿ ಕಾರ್ಯಕ್ರಮದಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ನಟ, ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಮೃತ ದೇಹ ಉಡುಪಿಯ ಕೆಮ್ಮಣ್ಣುವಿನ ಪಡುತೋನ್ಸೆಯ ಮನೆಗೆ ತಲುಪಿದೆ.
ಮೃತ ಕಾಮಿಡಿ ಕಿಲಾಡಿ- 3 ರ ವಿನ್ನರ್ ರಾಕೇಶ್ ಮನೆಗೆ ನೂರಾರು ಅಭಿಮಾನಿಗಳು, ಗ್ರಾಮಸ್ಥರು, ಕುಟುಂಬಸ್ಥರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಕಿರುತರೆ ನಟ ನಟಿಯರು, ರಾಕೇಶ್ ಆಪ್ತರು ಕೂಡ ಅಂತಿಮ ನಮನ ಸಲ್ಲಿಸಿದರು.
ತಾಯಿ ಶಾಂಭವಿ, ಸಹೋದರಿ ರಕ್ಷಿತಾ, ರಾಕೇಶ್ ಅವರ ಅಕಾಲಿಕ ಮರಣದಿಂದ ತೀವ್ರ ನೊಂದಿದ್ದು, ಮನೆಯಲ್ಲಿ ಕುಟುಂಬಿಕರು, ಮಿತ್ರವರ್ಗದಲ್ಲಿ ನೋವಿನ ಛಾಯೆ ಮಡುಗಟ್ಟಿದೆ.
ನಟಿ ರಕ್ಷಿತಾ, ನಿರೂಪಕಿ ಅನುಶ್ರೀ, ನಯನ, ಸೂರ್ಯ ಕುಂದಾಪುರ, ದೀಕ್ಷಿತ್, ಪ್ರವೀಣ್, ದೀಪಿಕಾ, ವಾಣಿ, ಉಮೇಶ್ ಕಿನ್ನಾರ, ಸೂರಜ್, ಜೀ ಮೆಂಟರ್ ವಿಜಯ್ ಶೆಟ್ಟಿ, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಪ್ರಸನ್ನ ಶೆಟ್ಟಿ ಬೈಲೂರು, ಗೀತಾಂಜಲಿ ಸುವರ್ಣ ಮತ್ತಿತರ ಗಣ್ಯರು, ನಟರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಸದ್ಯ ಕೆಮ್ಮಣ್ಣುವಿನ ಮನೆಯಲ್ಲಿ ಮೃತದೇಹದ ಅಂತಿಮ ವಿಧಿವಿಧಾನ ನಡೆದು ಸಂಜೆ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.

