ಉಡುಪಿ: ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಪ್ರತಿಭಟನೆ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ
(Udupi) ಉಡುಪಿ: ನೀಟ್ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವಾಗ ಶಿಕ್ಷಣ ಸಚಿವರು ಹಗರಣವಾಗಿಲ್ಲ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ಅವರು ಮೊದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಸಾಮಾಜಿಕ ಕಾರ್ಯಕರ್ತ ತಾಹೀರ್ ಹುಸೇನ್ ಆಗ್ರಹಿಸಿದರು.
ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಎಸ್.ಐ.ಓ ಉಡುಪಿ ಜಿಲ್ಲಾ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ವರದಿಗಳ ಪ್ರಕಾರ ಮೂವತ್ತು ಲಕ್ಷಕ್ಕೆ ಪ್ರಶ್ನಾ ಪತ್ರಿಕೆ ಮಾರಾಟವಾಗಿದೆ. ಸರಕಾರಕ್ಕೆ ಮಾನ ಮಾರ್ಯದೆ ಇಲ್ಲ. ಪಿಯುಸಿ ಫಲಿತಾಂಶದಲ್ಲಿ ಉತ್ತೀರ್ಣರಾಗದವರು ನೀಟ್ ರ್ಯಾಂಕ್ ಪಡೆಯುವುದು ಜನರ, ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿಯವರು ಪಾರದರ್ಶಕ ಪರೀಕ್ಷೆ ಕುರಿತು ಮಾತನಾಡುತ್ತಾರೆ. ಇದೀಗ ಅವರು ಈ ಹಗರಣದ ಕುರಿತು ಮಾತನಾಡಲಿ. ಅವರು ಶಿಕ್ಷಣ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಲಿ. ನೀಟ್ ಪರೀಕ್ಷೆಯನ್ನು ರದ್ದು ಮಾಡಿ ರಾಜ್ಯಗಳು ಫೆಡರಲ್ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

