ಉಡುಪಿ : ಸರಕಾರಿ ವಸತಿಗೃಹಕ್ಕೆ ನುಗ್ಗಿದ ಕಳ್ಳರು, ಮೂರು ಮನೆಗಳಿಂದ ಲಕ್ಷಾಂತರ ಮೌಲ್ಯದ ನಗ, ನಗದು ಕಳವು
ಪೊಲೀಸ್ ಜಾಕೆಟ್ ಧರಿಸಿ ಕಳ್ಳತನಕ್ಕೆ ಬಂದ ಕಳ್ಳರು
(Udupi) ಉಡುಪಿ: ಉಡುಪಿಯ ಮಿಷನ್ ಕಾಂಪೌಂಡ್ ಬಳಿಯ ಸರಕಾರಿ ವಸತಿ ಸಮುಚ್ಛಯದಲ್ಲಿ ಮತ್ತೆ ಕಳ್ಳತನ ನಡೆದಿದ್ದು, ಪೊಲೀಸ್ ಠಾಣೆಗೆ ಸಮೀಪವಿರುವ ಈ ವಸತಿ ಸಮುಚ್ಚಯದಲ್ಲಿ ಕೆಲವು ತಿಂಗಳುಗಳ ಹಿಂದೆ ಕಳ್ಳತನ ನಡೆದಿತ್ತು. ಇದೀಗ ಶನಿವಾರ ರಾತ್ರಿ ವೇಳೆ ಲೋಕೋಪಯೋಗಿ ಇಲಾಖೆಯ ವಸತಿ ಸಮುಚ್ಛಯದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.
ಈ ಬಾರಿ ಕಳ್ಳರು ಪೊಲೀಸ್ ಜಾಕೆಟ್ ಧರಿಸಿ ಬಂದಿದ್ದರು ಎಂಬುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ. ಕರ್ನಾಟಕ ಪೊಲೀಸ್ ಹೆಸರಿನ ಜಾಕೆಟ್ ಧರಿಸಿ ಬಂದಿರುವ ಕಳ್ಳರು, ಯಾರೂ ಇಲ್ಲದ ಮೂರು ಮನೆಗಳಿಗೆ ನುಗ್ಗಿದ್ದಾರೆ.ಅಲ್ಲಿ ಕಪಾಟು ಮತ್ತಿತರ ವಸ್ತುಗಳನ್ನು ಜಾಲಾಡಿ ಬೆಳ್ಳಿ ಚಿನ್ನ ಮತ್ತು ನಗದು ಸಹಿತ ಲಕ್ಷಾಂತರ ರೂ. ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ಆರೋಪಿಗಳ ಶೋಧ ಕಾರ್ಯ ಮುಂದುವರೆಸಿದ್ದಾರೆ.

