ಉಡುಪಿ : ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಕೋಟ ಒತ್ತಾಯ
(Udupi) ಉಡುಪಿ: ಆವತ್ತು ಸಿಎಂ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಕೋರ್ಟ್ ಅನುಮತಿ ನೀಡಿದಾಗ ಸಿದ್ದರಾಮಯ್ಯನವರು ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದರು. ಪಾರದರ್ಶಕ ತನಿಖೆ ನಡೆಯಬೇಕಾದರೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಅದೇ ಮಾನದಂಡವನ್ನು ಇವತ್ತು ಮುಖ್ಯಮಂತ್ರಿ ಅವರು ಅನುಸರಿಸಿ ರಾಜೀನಾಮೆ ನೀಡಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ ಮಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಡ ಹಗರಣದಲ್ಲಿ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ಸಿಎಂ ವಿರುದ್ಧದ ತನಿಖೆಗೆ ಅನುಮತಿ ನೀಡಿದೆ. ಮುಡ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು.
ಅವತ್ತು ಯಡಿಯೂರಪ್ಪ ಪ್ರಕರಣದಲ್ಲಿ ಯಾವ ರೀತಿ ನೀವು ರಾಜೀನಾಮೆ ಕೇಳಿದ್ದೀರೋ ಅದೇ ರೀತಿ ಇಲ್ಲಿ ನೀವು ರಾಜೀನಾಮೆ ನೀಡುವ ಮೂಲಕ ನಿಮ್ಮ ಪ್ರಾಮಾಣಿಕತೆಯನ್ನು ತೋರಿಸಬೇಕು ಎಂದು ಕೋಟ ಹೇಳಿದ್ದಾರೆ.

