• Home  
  •   ಎಂಜಿನಿಯರಿಂಗ್ ಶಿಕ್ಷಣ: ವಿಭಾಗದ ಆಯ್ಕೆಗಿಂತ ಎಂಜಿನಿಯರ್ ಆಗುವ ಪಯಣವೇ ಮುಖ್ಯ : ಡಾ. ಮಮತಾ ಐ (Engineering Education: The journey to becoming an engineer is more important than the choice of department: Dr. Mamata I)
- ಶಾಲಾ ಕಾಲೇಜು

  ಎಂಜಿನಿಯರಿಂಗ್ ಶಿಕ್ಷಣ: ವಿಭಾಗದ ಆಯ್ಕೆಗಿಂತ ಎಂಜಿನಿಯರ್ ಆಗುವ ಪಯಣವೇ ಮುಖ್ಯ : ಡಾ. ಮಮತಾ ಐ (Engineering Education: The journey to becoming an engineer is more important than the choice of department: Dr. Mamata I)

Share: ಎಂಜಿನಿಯರಿಂಗ್ ಶಿಕ್ಷಣ: ವಿಭಾಗದ ಆಯ್ಕೆಗಿಂತ ಎಂಜಿನಿಯರ್ ಆಗುವ ಪಯಣವೇ ಮುಖ್ಯ : ಡಾ. ಮಮತಾ ಐ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಮಮತಾ ಐ ಯವರಿಂದ ವಿಶೇಷ ಲೇಖನ (Udupi) ಉಡುಪಿ: ‘ಪದವಿ ನಿಮ್ಮ ವೃತ್ತಿಜೀವನಕ್ಕೆ ದಾರಿ ತೋರಿಸಬಹುದು. ಆದರೆ ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವವೇ ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ.    ಪ್ರತಿ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ನಂತರ ಎಂಜಿನಿಯರಿಂಗ್ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧರಾಗಿರುವ ಸಾವಿರಾರು […]

(Udupi) ಉಡುಪಿ: ‘ಪದವಿ ನಿಮ್ಮ ವೃತ್ತಿಜೀವನಕ್ಕೆ ದಾರಿ ತೋರಿಸಬಹುದು. ಆದರೆ ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವವೇ ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ.

   ಪ್ರತಿ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ನಂತರ ಎಂಜಿನಿಯರಿಂಗ್ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧರಾಗಿರುವ ಸಾವಿರಾರು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಜೀವನದ ಮಹತ್ವದ ನಿರ್ಧಾರದ ಎದುರು ನಿಲ್ಲುತ್ತಾರೆ. “ಯಾವ ಕಾಲೇಜು?”, “ಯಾವ ವಿಭಾಗ?”, “ಎಲ್ಲಿ ಪ್ರವೇಶ ಸಿಗಬಹುದು?”, “ಯಾವ ವಿಭಾಗದಲ್ಲಿ ಉತ್ತಮ ಸಂಬಳ ಸಿಗುತ್ತದೆ?” ಎಂಬ ಪ್ರಶ್ನೆಗಳು ಸಹಜವಾಗಿಯೇ ಪ್ರತಿಯೊಂದು ಮನೆಯಲ್ಲೂ ಕೇಳಿಬರುತ್ತವೆ, ಆದರೆ ಈ ಎಲ್ಲ ಪ್ರಶ್ನೆಗಳ ನಡುವೆ ಅತ್ಯಂತ ಮಹತ್ವದ ಒಂದು ಪ್ರಶ್ನೆ ಮಾತ್ರ ಹೆಚ್ಚಾಗಿ ಕೇಳಿಸದೆ ಉಳಿದುಬಿಡುತ್ತದೆ.

  ಈ ಒಂದೇ ಪ್ರಶ್ನೆಯ ಉತ್ತರವೇ ವಿದ್ಯಾರ್ಥಿಯ ನಾಲ್ಕು ವರ್ಷದ ಕಲಿಕೆಯ ದಿಕ್ಕನ್ನು ಮಾತ್ರವಲ್ಲ ಇಡೀ ವೃತ್ತಿಜೀವನವನ್ನೂ ರೂಪಿಸುತ್ತದೆ.

  ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಲ್ಲಿ ಒಂದು ಹೊಸ ಪ್ರವೃತ್ತಿ ಕಾಣಿಸುತ್ತಿದೆ. ಕೃತಕ ಬುದ್ಧಿಮತ್ತೆ ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ ಮೊದಲಾದ ವಿಭಾಗಗಳು ಹೆಚ್ಚು ಜನಪ್ರಿಯವಾಗಿರುವ ಕಾರಣ, ಅನೇಕ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಸಾಮರ್ಥ್ಯ ಮತ್ತು ಅಭಿರುಚಿಯನ್ನು ಅರಿತುಕೊಳ್ಳುವ ಮುನ್ನವೇ ಅವುಗಳತ್ತ ಆಕರ್ಷಿತರಾಗುತ್ತಿದ್ದಾರೆ.

  ಯಾವುದೇ ವಿಭಾಗ ಶ್ರೇಷ್ಠವಲ್ಲ ಅಥವಾ ಕೀಳಲ್ಲ. ಪ್ರತಿಯೊಂದು ವಿಭಾಗಕ್ಕೂ ತನ್ನದೇ ಆದ ಮಹತ್ವವಿದೆ. ಆದ್ದರಿಂದ ವಿಭಾಗದ ಜನಪ್ರಿಯತೆಗಿಂತ, ಆ ವಿಷಯವನ್ನು ಕಲಿಯುವ ಉತ್ಸಾಹವೇ ಆಯ್ಕೆಯ ಮಾನದಂಡವಾಗಬೇಕು. ದುರದೃಷ್ಟವಶಾತ್, ಇಂದು ಅನೇಕ ವಿದ್ಯಾರ್ಥಿಗಳ ಮೊದಲ ಪ್ರಶ್ನೆ “ಯಾವ ವಿಭಾಗದಲ್ಲಿ ಹೆಚ್ಚು ಸಂಬಳ ಸಿಗುತ್ತದೆ?’ ಎಂಬುದಾಗಿದೆ. ಆದರೆ ಬಹುಶಃ ನಾವು ಕೇಳಬೇಕಾದ ಪ್ರಶ್ನೆ “ಯಾವ ಕ್ಷೇತ್ರದಲ್ಲಿ ನಾನು ಸಮಾಜದ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಕಂಡುಹಿಡಿಯಬಲ್ಲೆ?” ಎಂಬುದಾಗಿರಬೇಕು, ಏಕೆಂದರೆ ಎಂಜಿನಿಯರಿಂಗ್ ಶಿಕ್ಷಣದ ಗುರಿ ಕೇವಲ ಉತ್ತಮ ಉದ್ಯೋಗವನ್ನು ಪಡೆಯುವುದಲ್ಲ; ಸಮಾಜದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಂಡು ಅವುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಬಲ್ಲ ಎಂಜಿನಿಯರ್‌ಗಳನ್ನು ರೂಪಿಸುವುದಾಗಿದೆ.

  ಇನ್ನೊಂದು ಸಂಗತಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಎಂಜಿನಿಯರಿಂಗ್ ಶಿಕ್ಷಣವನ್ನು ಅನೇಕ ವಿದ್ಯಾರ್ಥಿಗಳು ತಮ್ಮ ಆಯ್ಕೆ ಮಾಡಿಕೊಂಡ ವಿಭಾಗದ ಪಠ್ಯಕ್ರಮಕ್ಕಷ್ಟೇ ಸೀಮಿತಗೊಳಿಸುತ್ತಿದ್ದಾರೆ. ಆದರೆ ಆಧುನಿಕ ಎಂಜಿನಿಯರಿಂಗ್‌ಗೆ ವಿಭಾಗಗಳ ಗಡಿಗಳೇ ಇಲ್ಲ. ಇಂದಿನ ಯಾವುದೇ ಮಹತ್ವದ ತಂತ್ರಜ್ಞಾನವು ಒಂದೇ ವಿಭಾಗದ ಜ್ಞಾನದಿಂದ ನಿರ್ಮಾಣವಾಗುವುದಿಲ್ಲ.

  ನಾವು ಪ್ರತಿದಿನ ಬಳಸುವ ಮೊಬೈಲ್ ಫೋನ್‌ನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಅದರೊಳಗಿನ ಚಿಪ್‌ಗಳನ್ನು VLSI ತಂತ್ರಜ್ಞಾನ ರೂಪಿಸುತ್ತದೆ. ಎಲೆಕ್ಟ್ರಾನಿಕ್ಸ್ ಅವುಗಳಿಗೆ ಕಾರ್ಯನಿರ್ವಹಣೆಯ ಸಾಮರ್ಥ್ಯ ನೀಡುತ್ತದೆ. ವಿದ್ಯುತ್ ಎಂಜಿನಿಯರಿಂಗ್ ಶಕ್ತಿಯನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಕಂಪ್ಯೂಟರ್ ವಿಜ್ಞಾನ ಅದರ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತದೆ, ಕೃತಕ ಬುದ್ಧಿಮತ್ತೆ ಅದನ್ನು ಇನ್ನಷ್ಟು ಬುದ್ಧಿವಂತವಾಗಿಸುತ್ತದೆ. ಈ ಎಲ್ಲದರ ಹಿಂದೆಯೂ ಗಣಿತದ ನಿಖರತೆ ಕಾರ್ಯನಿರ್ವಹಿಸುತ್ತಿರುತ್ತದೆ. ಇಷ್ಟೆಲ್ಲ ವಿಭಾಗಗಳ ಸಮನ್ವಯದಿಂದ ನಿರ್ಮಾಣವಾದ ಸಾಧನವನ್ನು ನಾವು ಪ್ರತಿದಿನ ಸಹಜವಾಗಿ ಬಳಸುತ್ತೇವೆ. ಇನ್ನೊಂದು ಉದಾಹರಣೆ ಸ್ವಯಂಚಾಲಿತ ಬುದ್ದಿವಂತ ರೋಬೋಟ್, ಅದು ತನ್ನ ಸುತ್ತಲಿನ ಪರಿಸರವನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಬೇಕು, ಅದರ ಚಲನೆಯನ್ನು ರೂಪಿಸಲು ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಗತ್ಯ. ಮೋಟಾ‌ರ್, ಬ್ಯಾಟರಿ ಹಾಗೂ ವಿದ್ಯುತ್ ವ್ಯವಸ್ಥೆಗೆ ಎಲೆಕ್ನಿಕಲ್ ಎಂಜಿನಿಯರಿಂಗ್ ಬೇಕಾಗುತ್ತದೆ.

  ಸೆನ್ಸರ್‌ಗಳು ಮತ್ತು ನಿಯಂತ್ರಣ ವ್ಯವಸ್ಥೆಗೆ ಎಲೆಕ್ಟ್ರಾನಿಕ್ಸ್ ಅವಶ್ಯಕ, ಪ್ರೋಗ್ರಾಮ್ ಮತ್ತು ಅಲ್ಲಾರಿದಮ್‌ಗಳನ್ನು ಕಂಪ್ಯೂಟರ್ ವಿಜ್ಞಾನ ಅಭಿವೃದ್ಧಿಪಡಿಸುತ್ತದೆ. ಸಂಗ್ರಹವಾಗುವ ಮಾಹಿತಿಯನ್ನು ಡೇಟಾ ಎಂಜಿನಿಯರಿಂಗ್ ವಿಶ್ಲೇಷಿಸುತ್ತದೆ. ಇವೆಲ್ಲವನ್ನೂ ಕಾರ್ಯಗತಗೊಳಿಸುವ ಸಂಸ್ಕಾರಕಗಳನ್ನು (Processors) ರೂಪಿಸುವುದು VLSI ತಂತ್ರಜ್ಞಾನ, ಹಾಗಾದರೆ ಯಾವ ಒಂದು ವಿಭಾಗವು ಉಳಿದ ಎಲ್ಲ ವಿಭಾಗಗಳ ಸಹಕಾರವಿಲ್ಲದೆ ಸಂಪೂರ್ಣವಾಗಲು ಸಾಧ್ಯ.

  ಇದೇ ಆಧುನಿಕ ಎಂಜಿನಿಯರಿಂಗ್‌ನ ನಿಜವಾದ ಸ್ವರೂಪ, ವಿಭಾಗಗಳು ಪ್ರತ್ಯೇಕವಾಗಿರಬಹುದು. ಆದರೆ ಪರಿಹಾರಗಳು ಯಾವಾಗಲೂ ಅಂತರ್‌ಶಿಸ್ತೀಯವಾಗಿರುತ್ತವೆ.

  ಇಂದು ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಹೊಸ ಕ್ರಾಂತಿಯನ್ನುಂಟು ಮಾಡಿದೆ. ಕಠಿಣ ವಿಷಯಗಳನ್ನು ಅರ್ಥಮಾಡಿಕೊಳ್ಳಲು, ಪ್ರೋಗ್ರಾಮಿಂಗ್ ಅಭ್ಯಾಸ ಮಾಡಲು, ಸಂಶೋಧನೆಗೆ ನೆರವಾಗಲು ಹಾಗೂ ಹೊಸ ಆಲೋಚನೆಗಳನ್ನು ಪಡೆಯಲು Al ಅತ್ಯುತ್ತಮ ಸಾಧನವಾಗಿದೆ. ಆದರೆ ಒಂದು ವಿಷಯವನ್ನು ನಾವು ಮರೆಯಬಾರದು. Al ನಮ್ಮ ಚಿಂತನೆಯನ್ನು ಬೆಳೆಸಬೇಕು. ಅದನ್ನು ಬದಲಿಸಬಾರದು, ಪ್ರಶ್ನೆ ಕೇಳುವ ಅಭ್ಯಾಸ, ವಿಶ್ಲೇಷಣಾತ್ಮಕ ಚಿಂತನೆ, ಪ್ರಯೋಗಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವೇ ಒಬ್ಬ ಉತ್ತಮ ಎಂಜಿನಿಯರ್‌ ನ ನಿಜವಾದ ಗುರುತು. ಇವುಗಳನ್ನು ಯಾವುದೇ ತಂತ್ರಜ್ಞಾನ ನಮ್ಮ ಪರವಾಗಿ ಬೆಳೆಸಲು ಸಾಧ್ಯವಿಲ್ಲ.

  ಇಂದು ಕೃತಕ ಬುದ್ಧಿಮತ್ತೆಯ ಬಗ್ಗೆ ಅಪಾರ ಆಸಕ್ತಿ ಇರುವಂತೆಯೇ, ಗಣಿತ ಮತ್ತು ವಿಜ್ಞಾನದ ಮೂಲಭೂತ ಮಹತ್ವವನ್ನು ಮರೆಯುವ ಅಪಾಯವೂ ಇದೆ. ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ ಡೇಟಾ ಸೈನ್, ರೊಬೋಟಿಕ್ಸ್, ಸಿಗ್ನಲ್ ಪ್ರೊಸೆಸಿಂಗ್, ಸೆಮಿ ಕಂಡಕ್ಟರ್ ವಿನ್ಯಾಸ-ಇವೆಲ್ಲವೂ ಗಣಿತದ ಬಲವಾದ ಅಡಿಪಾಯದ ಮೇಲೆ ನಿರ್ಮಾಣಗೊಂಡಿವೆ. ಗಣಿತವು ಕೇವಲ ಒಂದು ವಿಷಯವಲ್ಲ. ಅದು ಎಂಜಿನಿಯರಿಂಗ್‌ನ ಭಾಷೆ, ಅದೇ ರೀತಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳು ಮೊದಲ ವರ್ಷದ ಪರೀಕ್ಷೆಗೆ ಮಾತ್ರ ಓದುವ ವಿಷಯಗಳಲ್ಲ, ಅವು ಇಡೀ ಎಂಜಿನಿಯರಿಂಗ್ ಬದುಕಿನ ಆಧಾರಸ್ತಂಭಗಳು.

   ಮತ್ತೊಂದು ಆತಂಕಕಾರಿ ಬೆಳವಣಿಗೆ ಎಂದರೆ, ಕಲಿಕೆಯನ್ನು ಪ್ರಮಾಣಪತ್ರಗಳ ಸಂಖ್ಯೆಯಿಂದ ಅಳೆಯುವ ಪ್ರವೃತ್ತಿ.

  ಆನ್‌ಲೈನ್ ಕೋರ್ಸ್‌ಗಳು, ಡಿಜಿಟಲ್ ಬ್ಯಾಡ್‌ಗಳು ಮತ್ತು ಪ್ರಮಾಣ ಪತ್ರಗಳು ಉಪಯುಕ್ತವೇ ಸರಿ. ಆದರೆ ಅವುಗಳು ಕಲಿಕೆಯ ಪರ್ಯಾಯವಾಗಲಾರವು. ಪ್ರಮಾಣ ಪತ್ರಗಳು ಸಂದರ್ಶನದ ಬಾಗಿಲನ್ನು ತೆರೆಯಬಹುದು. ಆದರೆ ಜ್ಞಾನ, ಕೌಶಲ್ಯ, ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವೇ ವೃತ್ತಿ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತವೆ.

  ಕೊನೆಗೆ, ಎಂಜಿನಿಯರಿಂಗ್‌ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಕ್ಷಣ ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು. ನಾನು ಕೇವಲ ಒಂದು ಪದವಿ ಪಡೆಯಲು ಹೊರಟಿದ್ದೇನೆಯೇ? ಅಥವಾ ಕಲಿಯಲು, ಹೊಸದನ್ನು ಸೃಷ್ಟಿಸಲು ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಉತ್ತಮ ಎಂಜಿನಿಯರ್ ಆಗಲು ಈ ಪಯಣವನ್ನು ಆರಂಭಿಸುತ್ತಿದ್ದೇನೆಯೇ?

  ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತದೆ. ಇಂದು ಜನಪ್ರಿಯವಾಗಿರುವ ವಿಷಯಗಳು ನಾಳೆ ಬದಲಾಗಬಹುದು. ಆದರೆ ಕುತೂಹಲ, ಕಲಿಯುವ ಮನೋಭಾವ, ಗಣಿತ ಮತ್ತು ವಿಜ್ಞಾನದ ಭದ್ರ ಅಡಿಪಾಯ, ನಿರಂತರ ಪರಿಶ್ರಮ ಮತ್ತು ಸಮಾಜಕ್ಕೆ ಉಪಯುಕ್ತವಾದ ಪರಿಹಾರಗಳನ್ನು ಕಂಡುಹಿಡಿಯುವ ಬದ್ಧತೆ ಎಂದಿಗೂ ಹಳೆಯದಾಗುವುದಿಲ್ಲ.

  ಆದ್ದರಿಂದ ವಿಭಾಗವನ್ನು ಆಯ್ಕೆ ಮಾಡುವ ಮೊದಲು, ನೀವು ಯಾವ ರೀತಿಯ ಎಂಜಿನಿಯರ್ ಆಗಬೇಕೆಂದು ನಿರ್ಧರಿಸಿ, ಏಕೆಂದರೆ ಭವಿಷ್ಯವನ್ನು ರೂಪಿಸುವುದು ನೀವು ಆಯ್ಕೆ ಮಾಡುವ ವಿಭಾಗವಲ್ಲ. ಆ ನಾಲ್ಕು ವರ್ಷಗಳಲ್ಲಿ ನೀವು ರೂಪಿಸಿಕೊಳ್ಳುವ ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವ ವಾಗಿದೆ.

ಡಾ. ಮಮತಾ ಐ, ಸಹ ಪ್ರಾಧ್ಯಾಪಕರು, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮತ್ತು ನಿರ್ವಹಣಾ ಮಹಾವಿದ್ಯಾಲಯ (SMVITM), ಬಂಟಕಲ್, ಉಡುಪಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.