ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್
ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆಶಿ
(Bengaluru) ಬೆಂಗಳೂರು: ತಳಮಟ್ಟದ ಹೋರಾಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಕನಕಪುರ ಬಂಡೆ ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ (DK Shivakumar) ಅವರು ಕರ್ನಾಟಕದ (Karnataka) ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಇಂದು ಸಂಜೆ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿಕೆ ಶಿವಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಸಂವಿಧಾನ ಪುಸ್ತಕ ಹಿಡಿದ ಡಿಕೆ ಶಿವಕುಮಾರ್ ಅವರು ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸುವ ಮೊದಲು ವೇದಿಕೆಯಲ್ಲಿ ಡಿಕೆ ಶಿವಕುಮಾರ ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು. ಬಳಿಕ ಅಜ್ಜಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ತಮ್ಮ ಪ್ರಮಾಣವಚನವನ್ನು ದೆಹಲಿಯ ಹೈಕಮಾಂಡ್ ಸಭೆಗಳು ಮತ್ತು ರಾಜ್ಯ ರಾಜಕೀಯ ಬೆಳವಣಿಗೆಗಳ ನಂತರ ಪೂರ್ಣಗೊಳಿಸಿದರು. ಇವರ ಸಂಪುಟದಲ್ಲಿ 13 ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ, ಡಿ.ಕೆ. ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಸಿ ವೇಣುಗೋಪಾಲ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳ ಮುಖ್ಯಮಂತ್ರಿ ಸತೀಶನ್, ಹೈಕೋರ್ಟ್ ಚೀಫ್ ಜಸ್ಟೀಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಜಿ.ಪರಮೇಶ್ವರ್ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ 12 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

