ಕಾಪು: ದಿವ್ಯಾಂಗರು, ಹಿರಿಯ ನಾಗರಿಕರ ತಪಾಸಣಾ ಶಿಬಿರ ಉದ್ಘಾಟನೆ
ಕಾಪು, ಜು. 14 : ಸಮಾಜದಲ್ಲಿ ಅಶಕ್ತರಾಗಿ ಬದುತ್ತಿರುವ ದಿವ್ಯಾಂಗರು, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಮಸ್ಯೆಗಳನ್ನು ಅರಿತುಕೊಂಡು, ಅವರ ನೋವಿಗೆ ಧ್ವನಿಯಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಾಪು ತಾಲೂಕು ಡಿಎಚ್‌ಒ ಡಾ. ವಾಸುದೇವ ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಡಿಯಲ್ಲಿ ಆರ್ಟಿಫಿಶಿಯಲ್ ಲಿಂಗ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ (ಅಲಿಂಕೋ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ರೆಡ್ ಕ್ರಾಸ್ ಜಿಲ್ಲಾ ಘಟಕ, ಉಡುಪಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಮಾಹೆ ಮಣಿಪಾಲ ಹಾಗೂ ಕಾಪು ಪುರಸಭೆ ಮತ್ತು ಕಾಪು ಜೇಸಿಐನ ಆಶ್ರಯದಲ್ಲಿ ಜೇಸಿ ಭವನದಲ್ಲಿ ನಡೆದ ದಿವ್ಯಾಂಗರಿಗೆ ಮತ್ತು ಹಿರಿಯನಾಗರಿಕರಿಗೆ, ಸಾಧನ ಸಲಕರಣೆ ವಿತರಣೆಗಾಗಿ ನಡೆದ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಪು ಜೇಸಿಐನ ಅಧ್ಯಕ್ಷೆ ಸುಖಾಲಾಕ್ಷಿ ಜೆ. ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ರತ್ನಾ ಸುವರ್ಣ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರೋಶ್ನಿ ಪೂಂಜಾ, ಅಲಿಂಕೋ ಪ್ರತಿನಿಧಿಗಳಾದ ಆಶಿಶ್ ಠಾಕೂರ್, ಜಿಗಾಸಾ, ಪ್ರಸಾದ್ ನೇತ್ರಾಲಯದ ನೇತ್ರ ತಜ್ಣೆ ಡಾ| ಸಂಗೀತಾ, ಕಾಪು ಪುರಸಭೆಯ ಪ್ರಥಮ ದರ್ಜೆ ಸಹಾಯಕಿ ಮಾಲತಿ ಅತಿಥಿಗಳಾಗಿ ಭಾಗವಹಿಸಿದ್ದರು.
೭೮ ಮಂದಿ ವಿಕಲಚೇತನರು, ೫೯ ಹಿರಿಯ ನಾಗರಿಕರು ಸೇರಿದಂತೆ ೧೪೦ಕ್ಕೂ ಅಧಿಕ ಮಂದಿ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಪ್ರಸಾದ್ ನೇತ್ರಾಲಯದ ವತಿಯಿಂದ ಉಚಿತ ನೇತ್ರ ತಪಾಸಣೆ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾಪು ಜೇಸಿಐನ ಪೂರ್ವಾಧ್ಯಕ್ಷ ರಾಕೇಶ್ ಕೆ. ಸ್ವಾಗತಿಸಿ, ಪ್ರಸ್ತಾವನೆಗೈದರು. ಉಡುಪಿ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಧುಸೂದನ್ ವಂದಿಸಿದರು.

