ಕಾಪು ಯೋಜನಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಆರೋಪ : ಲೋಕಾಯುಕ್ತ ದಾಳಿ
350 ಕಡತಗಳಲ್ಲಿ ವಿಲೇವಾರಿಯಾಗದ 86 ಕಡತಗಳು ಪತ್ತೆ
(Kaup) ಕಾಪು: ಕಾಪು ಯೋಜನಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಆರೋಪ, ಹಳೆ ಕಡತಗಳ ಬಾಕಿ, ಕಡತ ವಿಲೇವಾರಿಗೆ ವಿಳಂಬದ ಹಿನ್ನೆಲೆಯಲ್ಲಿ ಗುರವಾರ ಸಂಜೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ಧಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಸ್‌ಪಿ ಹಾಲಮೂರ್ತಿ ರಾವ್, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ಹಾಗೂ ರಾಜೇಂದ್ರ ನಾಯಕ್ ಮತ್ತು ಸಿಬ್ಬಂದಿ ಕಾಪು ನಗರ ಯೋಜನಾ ಪ್ರಾಧಿಕಾರದ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಕಾರ್ಯದರ್ಶಿ ಕೃಷ್ಣರವರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಹಾಲಮೂರ್ತಿ ರಾವ್ ನೇತೃತ್ವದಲ್ಲಿ ವಿಚಾರಣೆಯ ವೇಳೆ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ತಾವು ಇತ್ತೀಚೆಗಷ್ಟೇ ಇಲ್ಲಿಗೆ ನಿಯುಕ್ತಿ ಗೊಂಡಿದ್ದು, ನಾವು ಬರುವ ಮೊದಲೇ ನೂರಾರು ಕಡತಗಳು ಬಾಕಿಯುಳಿದಿದ್ದವು. ನಾವು ಸಾಕಷ್ಟು ಕಡತಗಳನ್ನು ಪರಿಶೀಲನೆ ನಡೆಸಿ ವಿಲೇವಾರಿ ಮಾಡುತ್ತಿದ್ದೇವೆ. ಕೆಲವೊಂದು ಸ್ಥಳ ತನಿಖೆ ನಡೆಸಿ ಸಕ್ರಮವಾದವುಗಳನ್ನು ಫೋನಾಯಿಸಿ ವಿಚಾರಿಸಿದಾಗ ಕೆಲವರಿಗೆ ಹಿಂಬರಹ ಕೂಡ ನೀಡದೆ ಕಡತ ತಡೆಹಿಡಿದಿರುವ ಬಗ್ಗೆ ತಿಳಿಸಿದ್ದಾರೆ.
ಸುಮಾರು 350 ಕ್ಕೂ ಅಧಿಕ ಕಡತಗಳನ್ನು ಪರಿಶೀಲಿಸಿದ್ದು ಇದರಲ್ಲಿ ವಿಲೇವಾರಿಯಾಗದ 86 ಕಡತಗಳನ್ನು ಪತ್ತೆ ಹಚ್ಚಿದ್ದಾರೆ. ಅತಿ ಶೀಘ್ರದಲ್ಲಿ ವಿಲೇವಾರಿ ಗೊಳಿಸುವಂತೆ ಯೋಜನಾ ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ವಿಚಾರಿಸಿದ ಅಧಿಕಾರಿಗಳು ಕಚೇರಿಯೊಳಗೆ ದಲ್ಲಾಳಿಗಳಿಗೆ ಅವಕಾಶ ಗು ನೀಡಬೇಡಿ. ಪ್ರಾಮಾಣಿಕವಾಗಿ ಜನರ ಕೆಲಸ ಮಾಡಿ ಎಂದು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿ ತೆರಳಿದ್ದಾರೆ.

