ಕಾಪು: ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಆಟಿ ಮಾರಿ ಪೂಜೆ ಸಂಪನ್ನ
(Kaup) ಕಾಪು: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯಲಿರುವ ಕಾಲಾವಧಿ ಆಟಿ (ಆಷಾಡ) ಮಾರಿಪೂಜಾ ಜಾತ್ರೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದೆ.
ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ (ಕಲ್ಯ) ಮಾರಿಗುಡಿ ದೇವಸ್ಥಾನಗಳಿಗೆ ಕ್ರಮವಾಗಿ ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ತರಲಾದ ಆಭರಣ ಮತ್ತು ಮಾರಿಯಮ್ಮ ದೇವಿಯ ಬಿಂಬವನ್ನು ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿದ ಬಳಿಕ ಆಟಿ ಮಾರಿಪೂಜೆಗೆ ಚಾಲನೆ ನೀಡಲಾಯಿತು.
ಆಟಿ ಮಾರಿಪೂಜೆಯ ಪ್ರಯುಕ್ತ ಮೂರು ಮಾರಿಗುಡಿಗಳನ್ನೂ ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರದೊಂದಿಗೆ ಅಲಂಕಾರಗೊಳಿಸಲಾಗಿದ್ದು, ವಿವಿಧ ಬಗೆಯ ಮಾರಾಟ ಮಳಿಗೆಗಳು ಭಕ್ತಾಧಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.
ಕಾಪು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ವರ್ಷಕ್ಕೆ ಮೂರು ಬಾರಿ ತುಳುವರ ಆಟಿ, ಜಾರ್ದೆ ಮತ್ತು ಸುಗ್ಗಿ ಮಾರಿಪೂಜೆ ನಡೆಯುತ್ತದೆ. ಇದರಲ್ಲಿ ಸುಗ್ಗಿ ಮಾರಿಪೂಜೆಯ ಸಂದರ್ಭ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮಾತ್ರವಲ್ಲದೇ ಉತ್ತರ ಕನ್ನಡ, ಘಟ್ಟ ಪ್ರದೇಶ ಹಾಗೂ ಕೇರಳ, ಮುಂಬಯಿ ಸಹಿತ ವಿದೇಶಗಳಿಂದಲೂ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸುತ್ತಾರೆ.
ಆಟಿ ಮಾರಿಪೂಜೆಯ ಪ್ರಯುಕ್ತ ಮೂರು ಮಾರಿಗುಡಿಗಳ ಪರಿಸರದಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ.
ಸಿಡುಬು, ಸಂತಾನ ಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿ ಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ತಿಂಗಳ ಮಾರಿ ಪೂಜೆ ನಡೆಯುತ್ತದೆ.
ಸುಗ್ಗಿ ಹಾಗೂ ಆಷಾಡ ತಿಂಗಳ ಮಾರಿಪೂಜೆಯಲ್ಲಿ ಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿಗುಡಿಗಳಿಗೆ ಆಗಮಿಸುತ್ತಿದ್ದು, ಜಾರ್ದೆ ಮಾರಿಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಆದರೂ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತದೆ.
ಕಾಪು ಮಾರಿಪೂಜೆಯಲ್ಲಿ ಕುರಿ ಹಾಗೂ ಕೋಳಿಗಳ ಬಲಿ ನಡೆಯುತ್ತದೆ. ಸರಕಾರ ಬಲಿ ನೀಡದಂತೆ ತಡೆ ನೀಡಿದ್ದರೂ, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಕೋಳಿಗಳನ್ನು ತಂದು ಕಡಿದು ತಮ್ಮ ಮನೆಗಳಿಗೆ ಕೊಂಡೊಯ್ಯತ್ತಾರೆ. ಪ್ರತಿ ಮಾರಿಪೂಜೆಗಳಲ್ಲಿ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದೂ ಇಲ್ಲಿಯ ವಿಶೇಷಗಳಲ್ಲೊಂದು.

