ಕಾರವಾರ: ಚತುಷ್ಪತ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾರವಾರದಿಂದ ಬಿಣಗಾವರೆಗೆ ನಿರ್ಮಾಣ ಮಾಡಿರುವ ಸುರಂಗ ಮಾರ್ಗದ ಸಂಚಾರಕ್ಕೆ ಸುರಕ್ಷತಾ ಪ್ರಮಾಣ ಪತ್ರ ನೀಡದೇ ಇರುವುದರಿಂದ ವಾಹನ ಹಾಗೂ ಜನರ ಸಂಚಾರವನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಭಾನುವಾರ ಆದೇಶ ಹೊರಡಿಸಿದ್ದಾರೆ.
ಟನಲ್ 1ಮತ್ತು 2 ರಲ್ಲಿ ಸಂಚಾರ ಮುಕ್ತಗೊಳಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯದೇ ಇರುವುದರಿಂದ ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಹಾಗೂ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಕಾರವಾರದಿಂದ ಬಿಣಗಾಕ್ಕೆ ಸಂಪರ್ಕಿಸುವ ಹಾಗೂ ಬಿಣಗಾದಿಂದ ಕಾರವಾರಕ್ಕೆ ಸಂಪರ್ಕಿಸುವ ಸುರಂಗ ಮಾರ್ಗಗಳಲ್ಲಿ ಯಾವುದೇ ರೀತಿಯ ವಾಹನ ಹಾಗೂ ಜನರ ಸಂಚಾರ ಮಾಡದೇ ಕ್ರಮ ಜರುಗಿಸುವಂತೆ ಹಾಗೂ ತಕ್ಷಣದಿಂದಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಅಂಕೋಲಾದಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಅಂಕೋಲಾಕ್ಕೆ ಸಂಚರಿಸಲು ಈ ಹಿಂದಿನಂತೆ ಬಿಣಗಾ ಬೈತಕೋಲ್ ಅಲಿಗದ್ದ ಮೂಲಕ ಸಂಚರಿಸಲು ಅನುವು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುರಕ್ಷತಾ ಪ್ರಮಾಣ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದಲ್ಲಿ ಸಂಚಾರ ನಿರ್ಭಂದವನ್ನು ಸಡಿಲಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅವರ ಆದೇಶದಂತೆ ಭಾನುವಾರದಿಂದಲೇ ವಾಹನ ಸಂಚಾರಕ್ಕೆ ನಿರ್ಭಂದ ಹಾಕಲಾಗಿದ್ದು, ರಸ್ತೆ ಬಂದ್ ಮಾಡಿದ್ದು, ಬ್ಯಾರಿಕೇಡ್ ಹಾಕಲಾಗಿದೆ. ಮುಂದಿನ ಆದೇಶ ಬರುವವರಿಗೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಲ್ಲ, ಎಲ್ಲ ವಾಹನ ಹಾಗೂ ಜನ ಸಂಚಾರವನ್ನು ನಿಷೇಧಗೊಳಿಸಲಾಗಿದೆ ಎಂದು ಸಂಚಾರ ಠಾಣೆಯ ಪಿಎಸ್ ಐ ದೇವೇಂದ್ರ ನಾಯಕ್ ತಿಳಿಸಿದ್ದಾರೆ.

