ಕೊಪ್ಪಲಂಗಡಿಯಲ್ಲಿ ನೈಟ್ರೋಜನ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಹೆಚ್ಚಿದ ಒತ್ತಡ: ಸಾರ್ವಜನಿಕರಲ್ಲಿ ಆತಂಕ
ಉಡುಪಿ: ಕಾಪುವಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಳ್ಳಾರಿಯ ಹೊಸಪೇಟೆಯಿಂದ ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಗೆ ಸಾಗಿಸುತ್ತಿದ್ದ ನೈಟ್ರೋಜನ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಾದ ಪರಿಣಾಮ ಅದರ ಚಾಲಕರು ನೈಟ್ರೋಜನ್ ಬಿಡುಗಡೆಗೊಳಿಸಿದ ಘಟನೆ ಶನಿವಾರ ಬೆಳಗ್ಗೆ ಘಟಿಸಿದೆ.
ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಆತಂಕಿತರಾಗಿದ್ದು ಕಂಡು ಬಂದಿದೆ.
ಪತ್ರಕರ್ತರು ಟ್ಯಾಂಕರ್ ಚಾಲಕರಲ್ಲಿ ಈ ಬಗ್ಗೆ ವಿಚಾರಿಸಿದಾಗ ಜನರು ಆತಂಕ ಪಡುವ ವಿಷಯ ಏನಿಲ್ಲ. ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ನೈಟ್ರೋಜನ್ ನ ಒತ್ತಡ ಹೆಚ್ಚಾದ ಪರಿಣಾಮ ನಾವು ಅದನ್ನು ಸ್ವಲ್ಪ ಮಟ್ಟಿಗೆ ಬಿಡುಗಡೆಗೊಳಿಸುತ್ತಿದ್ದೇವೆ ಎಂದರು.

