ಕ್ರಿಸ್ಮಸ್ ಹಬ್ಬದ ಸಂದರ್ಭ ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡನೀಯ : ಮೆಲ್ವಿನ್ ಡಿಸೋಜಾ
ಜಾತ್ಯಾತೀತ ರಾಷ್ಟ್ರದಲ್ಲಿ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ಖಂಡನೀಯ
(Udupi) ಉಡುಪಿ: ಕ್ರಿಸ್ಮಸ್ ಹಬ್ಬವನ್ನು ಗುರಿಯಾಗಿಸಿಕೊಂಡು ಕರ್ನಾಟಕ ಸೇರಿದಂತೆ ದೇಶದಾದ್ಯಂತ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಗಳು ಖಂಡನೀಯ ಮತ್ತು ಸಂಬಂಧಪಟ್ಟ ಸರಕಾರಗಳು ಸಮುದಾಯದ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯವಾದಿ ಕಾಂಗ್ರೆಸ್ ಮುಖಂಡ ಮೆಲ್ವಿನ್ ಡಿಸೋಜಾ ಶಿರ್ವ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕೇರಳದ ಪಾಲಕ್ಕಾಡ್ ನಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ತಂಡದ ಮೇಲೆ ಮತಿಯವಾದಿಗಳ ಹಲ್ಲೆ ನಡೆಸಿದ್ದು, ಇನ್ನು ಕೆಲವೆಡೆ ಕ್ರಿಸ್ಮಸ್ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರಿಗೆ ತಡೆಯೊಡ್ಡಿ ಹಿಂಸೆ ನೀಡಲಾಗಿದೆ.
ನವದೆಹಲಿಯಲ್ಲಿ ಸಾಂತಾಕ್ಲಾಸ್ ಟೋಪಿ ಧರಿಸಿದ್ದ ಕ್ರಿಶ್ಚಿಯನ್ ಮಹಿಳೆಯರು ಮತ್ತು ಮಕ್ಕಳ ಗುಂಪಿನ ವಿರುದ್ದ ಮತಾಂತರದ ಆರೋಪ ಹೊರಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಅನುಚಿತವಾಗಿ ವರ್ತನೆ ನಡೆಸಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದಕ್ಕೆ ಉದ್ದೇಶಪೂರ್ವಕವಾಗಿ ಪ್ರವೇಶ ಮಾಡಿ ಸತ್ಯ, ನಿಷ್ಠ, ಆರ್ಯ ಮತ್ತು ಆತನ ಬೆಂಬಲಿಗರು ಚರ್ಚಿನ ಪಾದ್ರಿಯೋರ್ವರಿಗೆ ಬೆದರಿಕೆ ಹಾಕಿರುವುದು ಸಂವಿಧಾನದ ಆಶಯಗಳ ವಿರುದ್ದ ನಡೆಯುತ್ತಿರುವ ಹಲ್ಲೆಯಾಗಿದೆ.
ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪಾಲನೆ ಮಾಡಲು ಸಂವಿಧಾನ ಸೂಕ್ತ ಅವಕಾಶ ನೀಡಿದ್ದು ಜಾತ್ಯಾತೀತ ರಾಷ್ಟ್ರದಲ್ಲಿ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ಖಂಡನೀಯವಾಗಿದೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಅಶಾಂತಿಯನ್ನು ಸೃಷ್ಠಿಸುವ ಹುನ್ನಾರ ಮೂಲಭೂತವಾದಿ ಗುಂಪುಗಳು ಹೊಂದಿದ್ದು ಇಂತಹವರ ವಿರುದ್ದ ಸರಕಾರಗಳು ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಈ ಮೂಲಕ ದೇಶದಲ್ಲಿ ಕ್ರೈಸ್ತ ಬಾಂಧವರು ಶಾಂತಿಯುತವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

