ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನ ಬಳಿ ಗೋ ಹತ್ಯೆ : ಹಿಂದೂ ಸಂಘಟನೆ ಆಕ್ರೋಶ
ಬೆಳ್ತಂಗಡಿಯ ನಂದ ಗೋಕುಲ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ
(Belthangadi) ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನ ಹತ್ತಿರ ಈದ್ ಮಿಲಾದ್ ಹಬ್ಬದ ಹಿಂದಿನ ದಿನ ಅಕ್ರಮ ಕಸಾಯಿ ಖಾನೆಯಲ್ಲಿ 9 ದನಗಳನ್ನು ಹಿಂಸಾತ್ಮಕವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಅಮಾನುಷ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಗ್ರವಾಗಿ ಖಂಡಿಸಿದೆ.
ಬೆಳ್ತಂಗಡಿಯ ನಂದ ಗೋಕುಲ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಪ್ರಾಂತ ಗೋರಕ್ಷಕ್ ಪ್ರಮುಖ್ ಸುನಿಲ್ ಕೆ. ಆರ್ ಮಾತನಾಡಿದರು.
ಆ ಸ್ಥಳದಲ್ಲಿ ಒಂದು ಜೀವಂತ ದನ ಹಾಗೂ ಕರು ಸಿಕ್ಕಿದ್ದು ಅದರ ರಕ್ಷಣೆ ಆಗಿದೆ. ಹಿಂದೂ ಸಮಾಜದ ಮೂಲ ನಂಬಿಕೆಗಳಲ್ಲಿ ಒಂದಾದ ಗೋವನ್ನು ಹಿಂದೂ ಸಮಾಜದ ನಂಬಿಕೆಗಳಿಗೆ ಅಪಚಾರ ಮಾಡಬೇಕು ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಬೇಕೆಂಬ ಉದ್ದೇಶದಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಈ ರೀತಿಯಾಗಿ ಕಾನೂನಿನ ಭಯ ಇಲ್ಲದೇ ರಾಜರೋಷವಾಗಿ ಅಕ್ರಮ ಕಸಾಯಿಖಾನೆಗಳಲ್ಲಿ ಹತ್ಯೆ ಮಾಡುವ ಕಾರ್ಯಗಳು ನಡೆಯುತ್ತಿದೆ. ಪೋಲಿಸ್ ಇಲಾಖೆ ಈ ಬಗ್ಗೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗೋವುಗಳ ವಧೆ ನಡೆದ ಜಾಗವನ್ನು ಸೀಜ್ ಮಾಡಬೇಕು. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೋಲಿಸ್ ಇಲಾಖೆಗೆ ಆಗ್ರಹಿಸಿದೆ.
ಇನ್ನೂ ಹಲವು ಕಡೆ ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆ ನಡೆಯುತ್ತಿದ್ದು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಮುಂದೆ ಸಮಾಜದಲ್ಲಿ ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಸುನಿಲ್ ಕೆ. ಆರ್ ಆಗ್ರಹಿಸಿದರು.
ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಗುರುವಾಯನಕೆರೆ ಚಲೋ ಹೋರಾಟ ಮಾಡಲಾಗುವುದು ಎಂದರು.
ಚಿಕ್ಕ ಮಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ಕಾರು ಸಹಿತ ವಿವಿಧ ವಾಹನಗಳಲ್ಲಿ ಗೋ ಸಾಗಣೆ ನಡೆಯುತ್ತಿದ್ದು, ಪೊಲೀಸರಿಗೆ ಮಾಹಿತಿ ಇದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾಹಿತಿ ಎಲ್ಲೆಡೆ ಹರಡುತ್ತಿದೆ. ಒಂದು ವೇಳೆ ಈ ರೀತಿ ನಡೆಯುವುದು ಗೊತ್ತಾದರೆ, ಹಿಂದೂ ಕಾರ್ಯಕರ್ತರು ರಸ್ತೆಗಿಳಿಯಬೇಕಾದೀತು ಇದಕ್ಕೆ ಪೊಲೀಸ್ ಇಲಾಖೆ ನೇರ ಹೊಣೆಯಾಗಲಿದೆ. ಎಂದು ಎಚ್ಚರಿಕೆ ನೀಡಿದ ಅವರು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮುಂದಕ್ಕೆ ಯಾವುದೇ ಇಂತಹ ಘಟನೆಗಳು ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳದ ಪ್ರಾಂತ ಸಹ ಸಂಯೋಜಕ ಪುನೀತ್ ಅತ್ತಾವರ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ತು ಬೆಳ್ತಂಗಡಿ ಅಧ್ಯಕ್ಷ ವಿಷ್ಣು ಮರಾಠೆ, ಪುತ್ತೂರು ಜಿಲ್ಲಾ ಬಜರಂಗದಳ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ಬಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕ ಪ್ರಭಾಕರ ಮಚ್ಚಿನ, ಬೆಳ್ತಂಗಡಿ ಪ್ರಖಂಡ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

