ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ನೋಂದಣಿ ಕಾರ್ಯಕ್ಕೆ ಜೂನ್ 18ರಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ಮೊದಲ ದಿನ 96 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದರೆ, ಎರಡನೇ ದಿನ ಈ ಸಂಖ್ಯೆ ದುಪ್ಪಟ್ಟಾಗಿತ್ತು. ಇದೀಗ ಮೂರನೇ ದಿನ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
ಜೂನ್ 20ರ ಹೊತ್ತಿಗೆ, ಕರ್ನಾಟಕದಲ್ಲಿ ಒಟ್ಟು 8,16,631 ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮದ ನೋಂದಣಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಾದ್ಯಂತ ಜೂನ್ 18 ರಿಂದ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಣಿ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ದಿನ 96,305 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಎರಡನೇ ದಿನ ಈ ಸಂಖ್ಯೆ 3,34,845ಕ್ಕೆ ಏರಿದೆ. ಜೂನ್ 20 ರಂದು 3,85,481 ನೋಂದಣಿಗಳು ಬಂದಿವೆ. ಈ ಮೂಲಕ ಮಂಗಳವಾರ ಸಂಜೆ ವೇಳೆ ಒಟ್ಟು 8,16,631 ಮಂದಿ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

