ಜನ್ಮಭೂಮಿಯಲ್ಲೇ ಶ್ರೀರಾಮನ ಪ್ರತಿಷ್ಠೆ ; ರಾಮಭಕ್ತರ ಕನಸು ನನಸು
ಅಯೋಧ್ಯೆ : ಜಗತ್ತಿನಾದ್ಯಂತ ಕೋಟ್ಯಾಂತರ ಭಕ್ತರ ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ಇಂದು ಪ್ರಾಣಪ್ರತಿಷ್ಠೆ ನೆರವೇರಿತು.
ಪ್ರಧಾನಿ ನರೇಂದ್ರ ಮೋದಿ (PM Narendra Modi), ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (RSS Supreme Mohan Bhagavath), ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (UP CM Yogi Adithyanat) ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯ ವಿಧಿಬದ್ಧವಾಗಿ ಸಂಪನ್ನಗೊಂಡಿತು.
12 ಗಂಟೆಗೆ ಸರಿಯಾಗಿ ಹೂವಿನ ಗುಚ್ಛವನ್ನು ಹಿಡಿದು ಮಂದಿರ ಪ್ರವೇಶ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಎರಡು ಮಂಟಪದಲ್ಲಿ ಪೂಜೆ ನೆರವೇರಿಸಿದರು. ಪ್ರತಿಷ್ಠಾ ಕಾರ್ಯ ನೆರವೇರುತ್ತಿದ್ದಂತೆ ಮೊದಲ ಬಾರಿಗೆ ಸರ್ವಾಲಂಕೃತ ಶ್ರೀ ರಾಮನ ಮೂರ್ತಿಯನ್ನು ನೇರ ಪ್ರಸಾರದಲ್ಲಿ ತೋರಿಸಲಾಯಿತು.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಪೂಜಾ ವಿಧಿವಿಧಾನಗಳು 11 ಗಂಟೆಯ ಸುಮಾರಿಗೆ ಪ್ರಾರಂಭಗೊಂಡಿತು. 12:05 ರಿಂದ 12:55 ರವರೆಗೆ ಸುಮಾರು 50 ನಿಮಿಷಗಳ ಕಾಲ ಪ್ರಾಣ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನ ನೆರವೇರಿತು.
ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ರಾಜ್ಯಪಾಲರು ಸೇರಿದಂತೆ ಐವರು ಗಣ್ಯರಿಗೆ ಮಾತ್ರ ಗರ್ಭಗುಡಿಯಲ್ಲಿ ಅವಕಾಶ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ವತಃ ಹೂವಿನ ಅಭಿಷೇಕ ಮತ್ತು ಆರತಿ ಎತ್ತಿ ಪೂಜೆ ನೆರವೇರಿಸಿದರು. ಆಚಾರ್ಯ ಗಣೇಶ್ವರ್ ದ್ರಾವಿಡ್, ಲಕ್ಷ್ಮೀಕಾಂತ ದೀಕ್ಷಿತ್ ನೇತೃತ್ವದಲ್ಲಿ ನೂರಾರು ಋತ್ವಿಜರು ಪ್ರತಿಷ್ಠಾ ಪೂಜಾ ಕೈಂಕರ್ಯ ನಡೆಸಿ ಕೊಟ್ಟರು.
ಸಾಧು ಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸುಮಾರು ಎಂಟು ಸಾವಿರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಂಡಿದ್ದಾರೆ.
ರಾಮ ಮಂದಿರ ಸುತ್ತಮುತ್ತ ಸೇರಿದಂತೆ ಅಯೋಧ್ಯೆ ನಗರದಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿರುವ ಅಯೋಧ್ಯೆ ನಗರಿ ಸಂಪೂರ್ಣವಾಗಿ ಸಾವಿರಾರು ಕ್ವಿಂಟಾಲ್ ಹೂಗಳಿಂದ ಅಲಂಕೃತಗೊಂಡಿದೆ.
ಅಯೋಧ್ಯೆ ಸೇರಿದಂತೆ ದೇಶದ ಲಕ್ಷಾಂತರ ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಮ ಮಂತ್ರ ಮೊಳಗುತ್ತಿದೆ.
ಸಾವಿರಾರು ದೇವಾಲಯಗಳಲ್ಲಿ ಹಿಂದು ಸಂಘಟನೆಗಳ ಮುಖಾಂತರ ರಾಮ ತಾರಕಯಜ್ಞ ಸಂಪನ್ನಗೊಂಡಿದೆ.

