ತೆಂಕ ಗ್ರಾ.ಪಂ ಪಿಡಿಓರವರ ಪೋರ್ಜರಿ ಸಹಿ ಪ್ರಕರಣ : ಪೋಲಿಸರು, ತಾ.ಪಂ ತನಿಖೆ ನಿಧಾನ ಗತಿ
ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರ ಆಕ್ರೋಶ
(Padubidri) ಪಡುಬಿದ್ರಿ : ಎರ್ಮಾಳು ತೆಂಕ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಸಿಬ್ಬಂದಿಗಳು ಪಿಡಿಒ ರಜನಿಯವರ ಸೀಲು ಮತ್ತು ಪೋರ್ಜರಿ ಸಹಿಯೊಂದಿಗೆ ಸ್ಥಿರಾಸ್ತಿಗಳ ನಿಯಮ ಬಾಹಿರ ಖರೀದಿ/ವರ್ಗಾವಣೆಗಾಗಿ ದೃಢಪತ್ರಗಳನ್ನು ನೀಡಿದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಿಂಗಳು ಕಳೆದರೂ ಇನ್ನೂ ಕ್ರಮ ವಹಿಸದ ಪೋಲಿಸ್ ಇಲಾಖೆಯ ಮತ್ತು ವಿವಿಧ ಇಲಾಖೆಗಳ ಬಗ್ಗೆ ತೆಂಕ ಗ್ರಾಮದ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕಾಪು ಪತ್ರಿಕಾಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತೆಂಕ ಗ್ರಾಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಜಯಶ್ರೀ ಹರೀಶ್ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ಕಾಪು ತಾಲೂಕು ಪಂಚಾಯತ್ ಸಿಇಒರವರಿಗೆ ಮನವರಿಕೆ ಮಾಡಲಾಗಿದೆ.
ವ್ಯಕ್ತಿಯೊಬ್ಬರು ಕಾರಿನಲ್ಲಿ ಆಗಮಿಸಿ ಕಛೇರಿ ಕಾರ್ಯದರ್ಶಿಯವರಿಂದ ಪತ್ರವೊಂದಕ್ಕೆ ಸೀಲನ್ನು ಹಾಕಿಸಿಕೊಂಡು ತೆರಳಿರುವುದು ಸಿಸಿ ಟೀವಿಯಲ್ಲಿ ದಾಖಲಾಗಿದೆ. ಕಾರಿನಲ್ಲಿ ಆಗಮಿಸಿರುವ ವ್ಯಕ್ತಿಗಳು ಯಾರೆಂದು ತನಿಖೆ ಆಗಬೇಕಿದೆ.
ಸರಕಾರಿ ಕಛೇರಿಯಲ್ಲಿ ಅಧಿಕಾರಿ ಸೀಲಿನ ದುರುಪಯೋಗ, ಪೋರ್ಜರಿ ಸಹಿ ಮಾಡಿ ಆಸ್ತಿಗಳ ಆಕ್ರಮ ವರ್ಗಾವಣೆಗೆ ಸಹಕರಿಸಿದ ಕಾರ್ಯದರ್ಶಿ, ಸಿಬ್ಬಂಧಿಗಳನ್ನು ತನಿಖೆಗೆ ಒಳಪಡಿಸಿ ವಿಚಾರಣೆಗೆ ಗುರಿಪಡಿಸುವುದು ಅತ್ಯಂತ ಅಗತ್ಯವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರು ಪತ್ರದಲ್ಲಿ ತಿಳಿಸಿರುತ್ತಾರೆ. ಆದರೆ ತನಿಖೆ ಆಗಿದೆಯ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಜನತೆಯ ಮುಂದೆ ಪತ್ರಿಕೆಯಲ್ಲಾಗಲಿ, ಕಛೇರಿಯ ಕಡತದಲ್ಲಿಲ್ಲ.
ದಿನಾಂಕ ಇಲ್ಲದ ಅನಧಿಕೃತ ದೃಢಪತ್ರಗಳನ್ನು ನೀಡಿ ಆಸ್ತಿಗಳ ಅಕ್ರಮ ವರ್ಗಾವಣೆ ಮಾಡಿದ ಪ್ರಕರಣಗಳನ್ನು ಉಪನೋಂದಣಿ ಕಛೇರಿಯಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಿ ವಿಚಾರಣಾಧಿಕಾರಿಯವರಿಗೆ ಮಾಹಿತಿ ಒದಗಿಸಬೇಕಾಗಿರುತ್ತದೆ ಎಂದು ಜಿಲ್ಲಾ ಪಂ. ಸಿಇಒ ಉಲ್ಲೇಖಿಸಿದ್ದರೂ, ಪಂಚಾಯತ್ ಕಾರ್ಯದರ್ಶಿಯವರ ವಿರುದ್ಧ ಆಗಲಿ, ಭಾಗಿಯಾದ ಸಿಬ್ಬಂದಿಯ ವಿರುದ್ಧ ಸೂಕ್ತಕ್ರಮ ಕೈಗೊಂಡಿಲ್ಲ.
ಫೋರ್ಜರಿ ಕಡತಗಳ ವಿಷಯ ಸಭೆಯಲ್ಲಿ ಪ್ರಸ್ತಾಪವಾಗುವ ಭಯದಿಂದ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ನಡೆಸಿಲ್ಲ. ಏಕೆ ನಡೆಸಿಲ್ಲ ಎಂದು ಎರಡು ತಿಂಗಳ ಬಳಿಕ ನಡೆದ ಸಾಮಾನ್ಯ ಸಭೆಯಲ್ಲಿ ಕೇಳಿದಾಗ ನನಗೆ ಹುಷಾರಿಲ್ಲ ಅದಕ್ಕೆ ಸಭೆ ನಡೆಸಿಲ್ಲ ಎಂಬ ಉತ್ತರ ಸಿಕ್ಕಿದೆ. ಆಡಳಿತರೂಢ, ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಭಾಗಿಯಾಗಿದ್ದಾರೆ. ಜೊತೆಗೆ ಕಾರ್ಯದರ್ಶಿಗಳು ಈ ಪ್ರಕರಣದಲ್ಲಿ ಬೆಂಬಲವಾಗಿ ಇದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಪಿಡಿಒ ಗಮನಕ್ಕೆ ಬಾರದೆ ಫೋರ್ಜರಿಯಾಗಿ ಸುಮಾರು 15 ಕಡತಗಳು ಕಛೇರಿಯಿಂದ ಹೊರಗಡೆ ಹೋಗಿದೆ. ಹಾಗೂ ಕರಾವಳಿ ಭಾಗದಲ್ಲಿ ನಿರ್ಮಾಣಗೊಂಡಂತಹ ವಾಣಿಜ್ಯ ಕಟ್ಟಡಗಳ ನಿರ್ಮಾಣದ ಎಲ್ಲಾ ದಾಖಲೆಗಳ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರತ್ಯೇಕ ತಂಡ ರಚಿಸಿ, ಕಡತ ಪರಿಶೀಲನೆಗೆ ಆದೇಶ ಮಾಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
ಗ್ರಾಮ ಪಂಚಾಯತ್ನ ಅಭಿವೃದ್ಧಿ ಶೂನ್ಯವಾಗಿದೆ. ಸಾಮಾನ್ಯ ಸಭೆಯೇ ಸರಕಾರದ ನಿಯಮದಂತೆ ನಡೆಯದಿದ್ದರೆ ಅಭಿವೃದ್ಧಿ ಆಗುವುದಾದರೂ ಹೇಗೆ? ಅಧ್ಯಕ್ಷರು ರಬ್ಬರ್ ಸ್ಟಾಂಪ್ ಆಗಿದ್ದಾರೆ.
ಗ್ರಾಮದ ಕರಾವಳಿ ಭಾಗದಲ್ಲಿ ಸರಕಾರಿ ಭೂಮಿ ಒತ್ತುವರಿ ಆಗಿರುವುದರ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ತಹಶೀಲ್ದಾರರು ಸರಕಾರಿ ಸ್ಥಳ ಅಳತೆಗೆ ಆದೇಶಿಸಿದಂತೆ ಅಳತೆ ಪ್ರಕ್ರಿಯೆ ನಡೆದಿದೆ. ಸದ್ರಿ ಅಳತೆಯಲ್ಲಿ ಕರಾವಳಿ ಭಾಗದ 5 ಎಕ್ರೆ ಸರಕಾರಿ ಭೂಮಿ ಎಲ್ಲಿದೆ ಎಂದು ಪತ್ತೆ ಹಚ್ಚಲಾಗಿದೆಯೇ? ಹಾಗೂ ಕರಾವಳಿ ಭಾಗದಲ್ಲಿರುವ ಒಟ್ಟು ಸರಕಾರಿ ಜಾಗ ಎಷ್ಟಿದೆ ಎಂದು ಗುರುತಿಸಿದೆಯೇ? ಈ ಬಗ್ಗೆ ಗ್ರಾಮದ ಕಂದಾಯ ಅಧಿಕಾರಿಯಿಂದ ಮಾಹಿತಿ ಪಡೆದು ಕರಾವಳಿ ಭಾಗದ ಸರಕಾರಿ ಜಾಗದ ಗುರುತು ಆಗಬೇಕು. ತೆಂಕ ಗ್ರಾಮ ಪಂಚಾಯತ್ಗೆ ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ತನಿಖೆ ನಡೆಸಬೇಕು.
ಪಿ.ಡಿ.ಒ ರವರ ಹುದ್ದೆಯ ಸೀಲ್ ಹಾಗೂ ಸಹಿಯನ್ನು ಫೋರ್ಜರಿ ಮಾಡಿರುವ ಕಾರ್ಯದರ್ಶಿ ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಬೇಕು ಇಲ್ಲದಿದ್ದಲ್ಲಿ ನಾವು ಈ ಬಗ್ಗೆ ಉಗ್ರ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ನಡೆಸುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತೆಂಕ ಗ್ರಾಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಜಯಶ್ರೀ ಹರೀಶ್, ಸದಸ್ಯರುಗಳಾದ ಸಂತೋಷ್, ಅಮಣಿ ಕುಂದರ್, ಮನೋಜ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ರತ್ನಾಕರ ಪೂಜಾರಿ, ಮಾಜಿ ತಾ. ಪಂ. ಸದಸ್ಯರಾದ ಕೇಶವ ಮೊಯಿಲಿ ಮತ್ತು ಶಾರದ ಪೂಜಾರಿ, ಉಪಸ್ಥಿತರಿದ್ದರು.

