ತೆಕ್ಕಟ್ಟೆ ಯಶಸ್ವಿ ಕಲಾವೃಂದ ರಂಗಾರ್ಪಣ, ಅಭಿನಂದನಾ ಸಮಾರಂಭ
ಯಕ್ಷಗಾನ ಕಲೆಗೆ ಯಶಸ್ವಿ ಕಲಾವೃಂದದ ಕೊಡುಗೆ ಅನನ್ಯ : ಡಾ. ತಲ್ಲೂರು
(Udupi) ಉಡುಪಿ : ತೆಕ್ಕಟ್ಟೆ ಕೋಮೆಯ ಯಶಸ್ವಿ ಕಲಾವೃಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿ ಯಶಸ್ವಿಯಾಗಿ 26ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸಂಸ್ಥೆ ಯಕ್ಷಗಾನಕ್ಕೆ ನೀಡಿದ ಕೊಡುಗೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಇಲ್ಲಿನ ಯಶಸ್ವಿ ಕಲಾವೃಂದದ ವಾರ್ಷಿಕ ಸಮಾರಂಭ ರಂಗಾರ್ಪಣ-25 ದಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.
ಯಶಸ್ವಿ ಕಲಾವೃಂದ ಯಕ್ಷಗಾನಕ್ಕೆ ತನ್ನ ವಿಶಿಷ್ಟ ಪರಿಕಲ್ಪನೆಯಿಂದಲೇ ಕಲಾರಸಿಕರ ಮನ ಗೆದ್ದಿದೆ. ರಾಜ್ಯೋತ್ಸವ ಪುರಸ್ಕಾರ ಯಶಸ್ವೀ ಕಲಾವೃಂದದ ಗುರುವಿಗೂ ಬಂದಿರುವುದು ಸಂತೋಷ ತಂದಿದೆ ಎಂದರು.
ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಎಲ್ಲಾ ಕಲೆಯನ್ನು ನಿರಂತರವಾಗಿ ಕರಗತ ಮಾಡಿಕೊಂಡು ಉತ್ತುಂಗಕ್ಕೇರಿದ ಸಂಸ್ಥೆಗೆ ಸಾಮಾಜಿಕವಾಗಿ ಮಾನ್ಯತೆ ದೊರೆಯಬೇಕು ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ,ಇತ್ತೀಚೆಗೆ ಯಕ್ಷಗಾನಕ್ಕೆ ದೊರೆಯುತ್ತಿರುವ ಪ್ರೋತ್ಸಾಹ ಇನ್ನಾವ ಕಲೆಗೂ ಸಿಗುತ್ತಿಲ್ಲ. ಇದರಿಂದ ಯಕ್ಷಗಾನ ಕಲೆಗೆ ಅಳಿವಿಲ್ಲ ಎಂದರು.
ಸಮಾರಂಭದಲ್ಲಿ ರಾಜ್ಯ ರಾಜ್ಯೋತ್ಸವ ಪುರಸ್ಕೃತರಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಕೋಟ ಸುರೇಶ್ ಬಂಗೇರ ಮತ್ತು ಐರ್‌ಬೈಲ್ ಆನಂದ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಲಕ್ಷ್ಮಿ ಮಚ್ಚಿನ, ಸಮಾಜ ಸೇವಕ ಸತೀಶ್ ಪೂಜಾರಿ ಹಾಗೂ ಕ್ರೀಡಾಪಟು ಸುದೀಪ್ ಶೆಟ್ಟಿ ಮಲ್ಯಾಡಿ ಅವರಿಗೆ ಅಭಿನಂದನೆ ನಡೆಯಿತು. ಶಿವರಾಮ ಕಾರಂತ ಬಾಲ ಪುರಸ್ಕೃತ ಹರ್ಷಿತಾ ಅಮೀನ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಸುಜಯ್ ಶೆಟ್ಟಿ, ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ, ದೇವದಾಸ್ ರಾವ್ ಕೂಡ್ಲಿ, ಗೋಪಾಲ ಪೂಜಾರಿ, ಲಂಬೋದರ ಹೆಗಡೆ, ವೆಂಕಟೇಶ ವೈದ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಪೂಜ ಆಚಾರ್, ಪಂಚಮಿ ವೈದ್ಯ, ಪವನ್ ಆಚಾರ್, ಕಿಶನ್ ಪೂಜಾರಿ, ಹರ್ಷಿತಾ ಅಮೀನ್ ಸ್ವಾಗತ ಗಾಯನ, ಅಭಿನಂದನಾ ಗಾಯನ, ಧನ್ಯವಾದ ಗಾಯನ ಮಾಡಿದರು.

