• Home  
  • ದಶಾವತಾರಕ್ಕೂ ಬೆಳಕಿನ ಹಬ್ಬಕ್ಕೂ ದೈವಿ ನಂಟಿನ ಬೆಸುಗೆ (A Divine Connection Between the Dashavatara and the Festival of Lights)
- fastival - ಧಾರ್ಮಿಕ

ದಶಾವತಾರಕ್ಕೂ ಬೆಳಕಿನ ಹಬ್ಬಕ್ಕೂ ದೈವಿ ನಂಟಿನ ಬೆಸುಗೆ (A Divine Connection Between the Dashavatara and the Festival of Lights)

Share: ದಶಾವತಾರಕ್ಕೂ ಬೆಳಕಿನ ಹಬ್ಬಕ್ಕೂ ದೈವಿ ನಂಟಿನ ಬೆಸುಗೆ  ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಮಂಡ್ಯದ ಸಾಯಿಚನ್ನಪ್ಪ ವಿಶೇಷ ಲೇಖನ (Mandya) ಮಂಡ್ಯ : ಬೆಳಕಿನ ಹಬ್ಬ ದೀಪಾವಳಿಯು ಕತ್ತಲೆಯನ್ನು ಓಡಿಸುವುದರ ಜೊತೆಗೆ ಮನೆ ಮನಗಳಲ್ಲಿ ದೈವಿ  ಜ್ಯೋತಿಯನ್ನ ಹೊತ್ತಿಸುವ ಅಮೃತ ಘಳಿಗೆಯಾಗಿದೆ. ಈ ದೈವಿ ಜ್ಯೋತಿಯಾದ ಭಗವಾನ್ ಶ್ರೀಮನ್ ನಾರಾಯಣನು “ಶಿಷ್ಟ ರಕ್ಷಣಾ: ದುಷ್ಟ ಶಿಕ್ಷಣ” ಮಾಡಲು ದಶಾವತಾರ ಎತ್ತಿ ಲೋಕವನ್ನು ಆಳಿಸಿದ್ದಾನೆ. ದುರ್ಜನರ ವಧೆ ಮಾಡಿ ಸುಜನರೆಲ್ಲರನ್ನು ಕಾಯ್ದಾಗೆಲ್ಲಾ ಜಗತ್ತಿಗೆ ಬೆಳಕು ಮೂಡಿದೆ. ಅದವೇ […]

(Mandya) ಮಂಡ್ಯ : ಬೆಳಕಿನ ಹಬ್ಬ ದೀಪಾವಳಿಯು ಕತ್ತಲೆಯನ್ನು ಓಡಿಸುವುದರ ಜೊತೆಗೆ ಮನೆ ಮನಗಳಲ್ಲಿ ದೈವಿ  ಜ್ಯೋತಿಯನ್ನ ಹೊತ್ತಿಸುವ ಅಮೃತ ಘಳಿಗೆಯಾಗಿದೆ. ಈ ದೈವಿ ಜ್ಯೋತಿಯಾದ ಭಗವಾನ್ ಶ್ರೀಮನ್ ನಾರಾಯಣನು “ಶಿಷ್ಟ ರಕ್ಷಣಾ: ದುಷ್ಟ ಶಿಕ್ಷಣ” ಮಾಡಲು ದಶಾವತಾರ ಎತ್ತಿ ಲೋಕವನ್ನು ಆಳಿಸಿದ್ದಾನೆ. ದುರ್ಜನರ ವಧೆ ಮಾಡಿ ಸುಜನರೆಲ್ಲರನ್ನು ಕಾಯ್ದಾಗೆಲ್ಲಾ ಜಗತ್ತಿಗೆ ಬೆಳಕು ಮೂಡಿದೆ. ಅದವೇ ದೀಪಾವಳಿಯಾಗಿದೆ. ಇದು ಅಂತರಾರ್ಥವಾಗಿಯೂ ಮತ್ತು ಹೊರ ಅರ್ಥವಾಯಿಯೂ ಒಳ ಮತ್ತು ‌ಹೊರ ತತ್ತ್ವವೂ ಆಗಿದೆ.

 ಈ ದಶಾವತಾರದಲ್ಲಿ ಹೇಗೆಲ್ಲ ಭಗವಂತನ ಕಾರಣಕ್ಕೆ ಬ್ರಹ್ಮಾಂಡದ ತುಂಬೆಲ್ಲಾ ಜ್ಯೋತಿ ಬೆಳಗಿದೆ ಕತ್ತಲು ಅಳಿದಿದೆ ಅನ್ನೋದನ್ನ ಸಂಕ್ಷಿಪ್ತವಾಗಿ ನೋಡುವ

  ಮತ್ಸ್ಯ ಅವತಾರದಲ್ಲಿ:

 ಶ್ರೀ ಹರಿಯ ಮತ್ಸ್ಯ (ಮೀನು) ಮೊದಲ ಅವತಾರದಲ್ಲಿ ಮಧು ಮತ್ತು ಕೈಟುಬ ಎಂಬ ರಾಕ್ಷಸರಿಂದ ವೇದಗಳನ್ನು  ಹಯಗ್ರೀವರು ರಕ್ಷಣೆ ಮಾಡಿ ಬ್ರಹ್ಮದೇವರಿಗೆ ನೀಡಿದಾಗ ಸಪ್ತರ್ಷಿಗಳು ಹಾಗೂ ಬ್ರಹ್ಮದೇವರು ಸೇರಿ ಮತ್ಸ್ಯದೇವರಿಗೆ ಆರತಿ ಬೆಳಗಿದ ದಿನವೇ ದೀಪಾವಳಿಯಾಗಿದೆ. ಲೋಕಕ್ಕೆ ಜ್ಞಾನ  ಜ್ಯೋತಿಯಾದ ವೇದಗಳ ರಕ್ಷಣೆ ಮೂಲಕ ಧರ್ಮ‌ ಮತ್ತು ಜ್ಞಾನ ಉಳಿಸಿದ ದಿನವನ್ನ ಬೆಳಕಿನ ಹಬ್ಬವಾಗಿ ಆಚರಿಸಲಾಗಿತ್ತು.

ಕೂರ್ಮವತಾರದಲ್ಲಿ :

  ಈ ಕೂರ್ಮ (ಆಮೆ) ಅವತಾರದಲ್ಲಿ ವಿಷ್ಣುವು ಬೃಹತ್ ಗಾತ್ರದ ಆಮೆಯಾಗಿ ಸಮುದ್ರದಲ್ಲಿ  ಮುಳುಗುತ್ತಿದ್ದ ಮಂದಾರ   ಪರ್ವತವನ್ನ ತಡೆದು ನಿಲ್ಲಿಸುತ್ತಾನೆ. ಅಂದರೆ ದೇವತೆಗಳು ತಮ್ಮ ಶಕ್ತಿಯನ್ನ ಪಡೆಯಲು ಸಮುದ್ರ ಮಥನ ಮಾಡಿ ಅಮೃತವನ್ನು ಸೇವಿಸುವಂತೆ ಭಗವಾನ್  ವಿಷ್ಣು  ಹೇಳಿ ಇದಕ್ಕೆ ರಾಕ್ಷಸರ ಸಹಾಯವೂ ಬೇಕೆಂದು   ಹೇಳಿ ಅದರಂತೆ ಸುರರು  (ದೇವತೆಗಳು) ಮತ್ತು ಅಸುರರು (ರಾಕ್ಷಸರು)‌ ಇವರಿಂದ ಸಮುದ್ರ ಮಥನವಾಗಿ ವಿಷ ಮತ್ತು ಅಮೃತ ಹೊರಬರುತ್ತೆ. ಅಮೃತವೂ ದೈವಿ ಸಂಕಲ್ಪದಂತೆ ದೇವಗಣಗಳ ಬಳಿಯಿರಬೇಕಾಗುತ್ತದೆ.‌ ವಿಷವನ್ನ ಸಾಕ್ಷಾತ್ ಶಿವ ಕುಡಿಯುತ್ತಾನೆ. ಸಮುದ್ರ ಮಥನದಿಂದ ದೇವಗಣಕ್ಕೆ ಶಕ್ತಿ ಪ್ರಾಪ್ತಿಯಾಗಿ ನ್ಯಾಯ ನೀತಿ ಧರ್ಮ ರಕ್ಷಣೆಗೆ  ಆಧಾರವಾಗಿ ಲೋಕವನುಳಿಸಲು ಆಮೆಯಾದ ಕೂರ್ಮನಿಗೆ ಜ್ಯೋತಿ ಮೂಲಕ  ವಂದಿಸಿದ ದಿನವೇ   ದೀಪಾವಳಿಯಾಗಿದೆ.

  ವರಾಹ ಅವತಾರದಲ್ಲಿ :

  ಅಸುರ ಹಿರಣ್ಯ ಕಶ್ಯಪನ‌ ತಮ್ಮ ಹಿರಣ್ಯಾಕ್ಷನು ಸೌರ ಕಕ್ಷೆಯಲ್ಲಿದ್ದ ಭೂದೇವಿಯನ್ನ ಅಪಹರಿಸಿ ಬಂಧಿಸಿದಾಗ ಬೃಹದಾಕಾರದ ವರಹ (ಹಂದಿ)ನಾಗಿ ಹಿರಾಣ್ಯಕ್ಷನ ವಿರುದ್ಧ ಹೋರಾಡಿ ಅವನನ್ನು ಹತ್ಯೆಗೈದು ಬಂದು ಭೂ ಮಾತೆಯನ್ನ ರಕ್ಷಣೆ ಮಾಡಿ ವಾಪಸ್ಸು ಸೌರ ಕಕ್ಷೆಗೆ ಬಿಟ್ಟ ಗಳಿಗೆಯಲ್ಲಿ ಭಗವಂತನಿಗೆ ದೀಪದಾರತಿಯಲ್ಲಿ‌ ಬೆಳಗಿ  ಆಚರಿಸಿದ ದಿನವೇ ದೀಪಾವಳಿ ಹಬ್ಬವಾಗಿದೆ.

 ನರಸಿಂಹ ಅವತಾರದಲ್ಲಿ :

ಲೋಕ ಕಂಟಕನಾಗಿ ಇಡೀ‌ ಲೋಕಗಳನ್ನೆಲ್ಲ ತನ್ನ ಮುಷ್ಟಿಯಲ್ಲಿಟ್ಟುಕೊಂಡು ಪೀಡಕನಾಗಿದ್ದ ಹಿರಣ್ಯ ಕಶ್ಯಪನನ್ನು  ಕಂಬದಿಂದ ಉಗ್ರ ನರಸಿಂಹನಾಗಿ ಹೊರಬಂದು ಹಿರಣ್ಯ ಕಶ್ಯಪನ ಹೊಟ್ಟೆಯನ್ನು ಸೀಳಿ ಸಂಹರಿಸಿದ ನರಸಿಂಹ ದೇವರಿಗೆ ಇಡಿ ದೇವಗಣಗಳು  ಪೂಜಿಸಿ ವಂದಿಸಿದ ದಿನವೇ ದೀಪಾವಳಿಯಾಗಿದೆ.

ವಾಮನ ಅವತಾರದಲ್ಲಿ:

 ಮೂರು ಲೋಕವನ್ನು ಜಯಿಸಿದ ಅಸುರರ ರಾಜ ಬಲಿ ಚಕ್ರವರ್ತಿಯು ದಾನ ಧರ್ಮದಲ್ಲಿ ಎತ್ತಿದ ಕೈ. ಇವನು ಪ್ರಹ್ಲಾದನ ಮೊಮ್ಮಗ. ಇಂದ್ರ ಪದವಿಗೆ ಇವನಿಂದ ಕುತ್ತು ಬಂದಾಗ ಬ್ರಹ್ಮನ ಮೂಲಕ ವಿಷ್ಣುವಿಗೆ ಮೊರೆ ಹೋದಾಗ ಆಗ ವಿಷ್ಣುವು ಕಶ್ಯಪ ಹಾಗೂ ಅದಿತಿ ದೇವಿಯ ಮಗನಾಗಿ ವಾಮನ ಜನಿಸಿದನು. ಇದು ವಿಷ್ಣುವಿನ ಐದನೇ ಅವತಾರವಾಗಿದ್ದು, ಬಾಲಕನ ರೂಪದಲ್ಲಿ ವಾಮನ‌ ಬಂದಾಗ ಯಜ್ಞ ಮಾಡುತ್ತಿದ್ದ ದಾನಿಯಾದ ಬಲಿ ಚಕ್ರವರ್ತಿಯು ಏನು ಬೇಕು ಅಂತ ಕೇಳಿದಾಗ ಮೂರು ಹೆಜ್ಜೆಯಿಡಲು ಜಾಗ ಬೇಕು ಅಂತ ಕೇಳುತ್ತಾನೆ. ಆಗ ಬಲಿಯು ಇಷ್ಟೆನಾ ಅಂತ ಹೇಳಿ ಆಗಲಿ ಎಂದು ಅನುಮತಿಸುತ್ತಾನೆ. ಆದರೆ ಇವನ ಗುರು ಶುಕ್ರಚಾರ್ಯರು ಬಲಿಯನ್ನ ಎಚ್ಚರಿಸಿ ಈ ಬಾಲಕನು ಸಾಮಾನ್ಯನಲ್ಲ. ನೀನು ಕೊಟ್ಟ ಅನುಮತಿಯನ್ನು ರದ್ದುಪಡಿಸು ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ ಎಂದು ಎಚ್ಚರಿಸುತ್ತಾನೆ. ಆದರೆ ಬಲಿ ಒಮ್ಮೆ‌ ಕೊಟ್ಟ ಮಾತನ್ನು ನಡೆಸಿಕೊಡಬೇಕೆಂದು  ವಾಮನನಿಗೆ  ಹೆಜ್ಜೆಗಳನ್ನು ಇಡಲು ಅವಕಾಶ ಕೊಟ್ಟಾಗ ವಾಮನು ಮೊದಲ  ಹೆಜ್ಜೆಯಿಂದ ಇಡೀ  ಭೂಲೋಕಕ್ಕಿಟ್ಟು ಮುಚ್ಚಿಬಿಡುತ್ತಾನೆ. ನಂತರ  ಆಕಾಶಕ್ಕೆ ಎರಡನೇ ಹೆಜ್ಜೆಯಿಟ್ಟು ಆಕಾಶವನ್ನೆಲ್ಲ ಮುಚ್ಚಿಬಿಡುತ್ತಾನೆ. ನಂತರ ಇನ್ನೂ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಅಂತ ಬಲಿಯನ್ನು ಕೇಳಿದಾಗ, ನನ್ನ ತಲೆಯ ಮೇಲೆ ಇಡು ಅನ್ನುತ್ತಾನೆ. ಆಗ ವಾಮನು ಬಲಿಯ ತಲೆ ಮೇಲೆ ಮೂರನೇಯ ಹೆಜ್ಜೆಯಿಟ್ಟು ಪಾತಳಕ್ಕೆ ತುಳಿಯುತ್ತಾನೆ. ನಂತರ ಬಲಿ ಚಕ್ರವರ್ತಿಯು ಭೂಲೋಕದ ಜನರನ್ನು ದರ್ಶಿಸಬೇಕು ಸ್ವಾಮಿ ಅವಕಾಶ ಕೊಡಿ ಅಂತ ಕೇಳಿಕೊಂಡಾಗ ಆಗ ಸ್ವಾಮಿಯು, ನರಕ ಚತುರ್ದಶಿ ಆದ ಬಳಿಕ  ದೀಪಾವಳಿ ದಿನ ಬರುತ್ತದೆ ಆಗ ನೋಡೆಂದು ಜೊತೆಗೆ ಹೇಳಿ ಚಿರಂಜೀವಿಯಾಗುವ ವರವನ್ನು ಸಹ ಕೊಟ್ಟು ಆಶೀರ್ವದಿಸುತ್ತಾನೆ. ಬಲಿಯ ಅಹಂಕಾರವನ್ನು ತುಳಿದು ಆಶೀರ್ವದಿಸಿದ  ದಿನವೇ ದೀಪಾವಳಿಯಾಗಿದೆ.

 ಪರಶುರಾಮನಾಗಿ:

 ಈ ಪರಶು (ಕೊಡಲಿ) ರಾಮನ ಅವತಾರದಲ್ಲಿ ಎಲ್ಲಾ ರಾಕ್ಷಸರು ದುಷ್ಟ ರಾಜರಾಗಿ ಹುಟ್ಟಿ ಲೋಕ ಕಂಟಕರಾದಾಗ ಭೂಮಂಡಲವನ್ನು  21 ಬಾರಿ ಸುತ್ತಿ ಎಲ್ಲಾ ರಾಜರನ್ನು ಆಪೋಶನ (ಸಂಹಾರ) ಮಾಡಿದ ನಂತರ ಭೂದೇವಿ ವಂದಿಸಿದ ದಿನವೇ ದೀಪಾವಳಿ ಹಬ್ಬವಾಗಿದೆ.

 ಶ್ರೀರಾಮನಾಗಿ :

ಈ ಜಗತ್ತಿನಲ್ಲಿ ಯಾರು ಬೇಡದ ವರವನ್ನ ಬೇಡಿ ನವಗ್ರಹಗಳನ್ನು ಅಷ್ಟ ದಿಕ್ಪಾಲಕರನ್ನು ಪಂಚ ಭೂತಗಳನ್ನು ದೇವತೆಗಳನ್ನ ರಾಕ್ಷಸರನ್ನು ಗಂಧರ್ವರು ಸೇರಿದಂತೆ ಸಮಸ್ತ ಜಗತ್ತಿಗೆ ಭಯಂಕರ ಕಾಟ ಕೊಟ್ಟಿದ್ದ ಅಸುರ ರಾವಣನನ್ನು ಶ್ರೀರಾಮರು ಸಂಹಾರ ಮಾಡಿದ ನಂತರ ಎಲ್ಲಾ ದೇವರು ಎಲ್ಲಾ ಗಣಗಳು ನವಗ್ರಹಗಳಾದಿಯಾಗಿ ಎಲ್ಲರೂ ಸೇರಿ  ಭಗವಂತನಿಗೆ ಆರತಿ ಮಾಡಿದ ದಿನವೇ ದೀಪಾವಳಿ.

 ಹದಿನಾಲ್ಕು ವರ್ಷಗಳ ವನವಾಸಕ್ಕೆ ಶ್ರೀರಾಮರು ಹೋದಾಗ ಅಯೋಧ್ಯೆ ಜನ ಮನೆಗಳಲ್ಲಿ ದೀಪ ಹಚ್ಚೋದನ್ನ ನಿಲ್ಲಿಸಿದರು. ರಾವಣನ ಸಂಹರಿಸಿ ವನವಾಸ  ಮುಗಿಸಿ ವಾಪಸ್ಸು ಅಯೋಧ್ಯೆ ಬಂದಾಗ ಹರ್ಷೊದ್ಗಾರದೊಂದಿಗೆ ಮನೆ‌ ಮನಗಳಲ್ಲಿ ದೀಪ ಬೆಳಗಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಮಹಾ ಸುದಿನವೇ ಈ ಬೆಳಕಿನ ದೀಪಾವಳಿ  ಹಬ್ಬವಾಗಿದೆ.

 ಶ್ರೀಕೃಷ್ಣವತಾರದಲ್ಲಿ :

  ವಿಷ್ಣು ಹಾಗೂ ಭೂದೇವಿಯ ಮಗನಾಗಿ ನರಕಾಸುರ ಜನಿಸುತ್ತಾನೆ. ಇವನಿಗೆ ತಾಯಿ ಬಿಟ್ಟು ಯಾರಿಂದಲೂ ಸಾವು ಬರದಂತೆ ಬ್ರಹ್ಮ ದೇವರಿಂದ ವರ ಪಡೆದಿರುತ್ತಾನೆ. ಇದು ಅವನ ಅಹಂಕಾರಕ್ಕೆ ಕಾರಣವಾಗಿ  ತನ್ನ ಶಕ್ತಿಯಿಂದ  ಭೂಮಿಯ ಮೇಲಿನ ರಾಜರುಗಳ 16100 ಕನ್ಯೆಯರನ್ನು ಅಪಹರಣ ಮಾಡಿ ಬಂಧನದಲ್ಲಿರಿಸುತ್ತಾನೆ. ಇವನ‌ ಉಪಟಳವು ಭೂಲೋಕ ತುಂಬೆಲ್ಲಾ ಆವರಿಸಿದಾಗ ಶ್ರೀಕೃಷ್ಣನು ಭೂ ತಾಯಿಯ ಅಂಶಳಾದ ತನ್ನ ಪತ್ನಿ ಸತ್ಯಭಾಮೆಯ ಮೂಲಕ ನರಕಾಸುರನನ್ನು‌  ಸಂಹರಿಸುತ್ತಾನೆ. ಆಗ ಗೃಹ ಬಂಧನದಿಂದ ಮೋಕ್ಷ ಪಡೆದ ಎಲ್ಲಾ ಗೋಪಿಕೆಯರು (ಕನ್ಯೆಯರು) ಸಾಷ್ಟಾಂಗ ನಮಸ್ಕರಿಸಿ ಜ್ಯೋತಿ ಬೆಳಗಿಸಿದ ದಿನವೇ ಈ ಹಬ್ಬ.

 ಕಲಿಯುಗದಲ್ಲಿ ಶ್ರೀವೆಂಕಟೇಶ್ವರನಾಗಿ:

  ಈ  ಕಲಿಯುಗದಲ್ಲಿ ಕೊನೆಯವರೆಗೂ ಭಕ್ತರ  ಕಾಯಲು ಭೂಲೋಕದಲ್ಲಿ ವಿಗ್ರಹವಾಗಿ ತಿರುಪತಿಯಲ್ಲಿ ಶ್ರೀ ಮಹಾವಿಷ್ಣುವು ತಿರುಮಲನಾಗಿ ನೆಲಗೊಂಡ ಮಹಾದಿನದಂದು ಸ್ವಾಮಿಗೆ ದೀಪಾರತಿ ಮಾಡಿದ ದಿನವನ್ನು ದೀಪಾವಳಿ ಹಬ್ಬವಾಗಿ ಆಚರಿಸಲಾಗುತಿದೆ.

  ಬೆಳಕಿನ ಹಬ್ಬಕ್ಕೆ ಸನಾತನ ತತ್ತ್ವದ ಸಾರ

  ಭಗವಂತನು ತನ್ನ ‌ಎಲ್ಲಾ ಸೃಷ್ಟಿಯ ಹಾಗೂ ಹಬ್ಬಗಳ ಹಿಂದೆ ಅನೇಕ ಮಹತ್ವದ  ಉದ್ದೇಶ ಹಾಗೂ ಸಂದೇಶಗಳನ್ನು ಸಾರುತ್ತಾನೆ. ಈ ಮುನ್ನ ಹೇಳಿದ ದಶಾವತಾರಗಳ ಪೂರ್ವದಲ್ಲಿ ಇಡೀ ಜಗತ್ತು ಕತ್ತಲಲ್ಲಿ ತುಂಬಿತ್ತು ಭಗವಂತನ ಇಚ್ಚೆಯಂತೆ ಬ್ರಹ್ಮಾಂಡದಲ್ಲಿ ಬೆಳಕು ಮೂಡಿತು. ಎಲ್ಲೆಲ್ಲೂ ಬೆಳಕಿನ‌ ಕಿರಣಗಳ ತೋರಣ ಅಲ್ಲೆಲ್ಲಾ ದೀಪಾವಳಿಯ ಹೂರಣವು ತುಂಬಿ ತುಳುಕಿತು.

  ನಮ್ಮೊಳಗಿನ ಕಾಮ‌ ಕ್ರೋದ ಅಹಂಕಾರ‌ ಮದ ಮತ್ಸರ  ಎಂಬ ನರಕಾಸುರನನ್ನು ವಧಿಸಬೇಕಿದೆ. ನಮ್ಮಲ್ಲಿರುವ ಹಣ‌ ಅಧಿಕಾರ ಅಂತಸ್ತು ಕೀರ್ತಿ ಇದೆ ಅನ್ನುವ‌ ತೋಳ್ಬಲವನ್ನ ಬಲಿಕೊಡಬೇಕಿದೆ. ವಿನಯ ವಿನಮ್ರ ವಿಧೇಯತೆ ತೋರಬೇಕಿದೆ. ಜ್ಞಾನ, ಭಕ್ತಿ, ತ್ಯಾಗ, ಸೇವೆ ಮಾಡಿ ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ನಡೆಯಬೇಕಿದೆ ಅದುವೇ ನಿತ್ಯ ಸತ್ಯ ದೀಪಾವಳಿ ಹಬ್ಬಕ್ಕೆ ಅರ್ಥ ಬರೋದು.

   ಬರಹ: ಸಾಯಿಚನ್ನಪ್ಪ ರಾಜು

Leave a comment

Your email address will not be published. Required fields are marked *

eMedia Kannada  @2025. All Rights Reserved.