• Home  
  •   ದೀಪಾವಳಿ: ಬೆಳಕಿನ ಹಬ್ಬ, ಮಾನವೀಯತೆಯ ಸಂದೇಶ (Diwali: The Festival of Lights, a Message of Humanity)
- fastival

  ದೀಪಾವಳಿ: ಬೆಳಕಿನ ಹಬ್ಬ, ಮಾನವೀಯತೆಯ ಸಂದೇಶ (Diwali: The Festival of Lights, a Message of Humanity)

Share:   ದೀಪಾವಳಿ: ಬೆಳಕಿನ ಹಬ್ಬ, ಮಾನವೀಯತೆಯ ಸಂದೇಶ ಅನ್ವರ್ ಅಲಿ ಕಾಪುರವರಿಂದ ದೀಪಾವಳಿಯ ಅಂಗವಾಗಿ ವಿಶೇಷ ಲೇಖನ. (Udupi) ಉಡುಪಿ: ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ಅದು ಬದುಕಿನಲ್ಲಿ ಬೆಳಕು ಮೂಡಲಿ, ಮನಸ್ಸುಗಳಲ್ಲಿ ಪ್ರೀತಿ ಅರಳಲಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂಬ ಆಶಯವನ್ನು ಪ್ರತಿಬಿಂಬಿಸುವ ಸಂದರ್ಭವೂ ಹೌದು.   ಬೆಳಕು ಕತ್ತಲೆಯನ್ನು ದೂರಮಾಡುವಂತೆ, ಜ್ಞಾನವು ಅಜ್ಞಾನವನ್ನು ದೂರಮಾಡಲಿ. ಸತ್ಯವು ಅಸತ್ಯವನ್ನು ಮೀರಿಸಲಿ. ಪ್ರೀತಿ ದ್ವೇಷವನ್ನು ಗೆಲ್ಲಲಿ. ನ್ಯಾಯ ಅನ್ಯಾಯವನ್ನು ನಿವಾರಿಸಲಿ ಎಂಬ […]

(Udupi) ಉಡುಪಿ: ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ಅದು ಬದುಕಿನಲ್ಲಿ ಬೆಳಕು ಮೂಡಲಿ, ಮನಸ್ಸುಗಳಲ್ಲಿ ಪ್ರೀತಿ ಅರಳಲಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂಬ ಆಶಯವನ್ನು ಪ್ರತಿಬಿಂಬಿಸುವ ಸಂದರ್ಭವೂ ಹೌದು.

  ಬೆಳಕು ಕತ್ತಲೆಯನ್ನು ದೂರಮಾಡುವಂತೆ, ಜ್ಞಾನವು ಅಜ್ಞಾನವನ್ನು ದೂರಮಾಡಲಿ. ಸತ್ಯವು ಅಸತ್ಯವನ್ನು ಮೀರಿಸಲಿ. ಪ್ರೀತಿ ದ್ವೇಷವನ್ನು ಗೆಲ್ಲಲಿ. ನ್ಯಾಯ ಅನ್ಯಾಯವನ್ನು ನಿವಾರಿಸಲಿ ಎಂಬ ಸಂದೇಶವನ್ನು ಈ ಹಬ್ಬದಿಂದ ಗ್ರಹಿಸಬಹುದು.

  ಹಬ್ಬಗಳ ನಿಜವಾದ ಸೌಂದರ್ಯ ಇರುವುದು ಕೇವಲ ಸಂಭ್ರಮಾಚರಣೆಯಲ್ಲಿ ಅಲ್ಲ, ಬದಲಾಗಿ ಅವು ಜನರಲ್ಲಿ ಬೆಳೆಸುವ ಮಾನವೀಯ ಗುಣಗಳಲ್ಲಿ.

  ಬಡವರ ಮುಖದಲ್ಲಿ ನಗು ಮೂಡಿಸುವುದು, ನೆರೆಹೊರೆಯವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮತ್ತು ಪರಸ್ಪರ ಗೌರವದಿಂದ ಬದುಕುವುದು ಪ್ರತಿಯೊಂದು ಹಬ್ಬದ ಸಂದರ್ಭದಲ್ಲೂ ಮೊದಲ ಆಧ್ಯತೆಯಾಗಬೇಕು.

 ಭಾರತವು ವಿವಿಧ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಜನರು ಒಟ್ಟಾಗಿ ಬದುಕುವ ಸುಂದರ ದೇಶ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ ಮತ್ತು ಸಂಪ್ರದಾಯಗಳನ್ನು ಗೌರವದಿಂದ ಪಾಲಿಸುವ ಸ್ವಾತಂತ್ರ್ಯವಿದೆ. ಒಬ್ಬರ ಹಬ್ಬದಲ್ಲಿ ಮತ್ತೊಬ್ಬರು ಪಾಲ್ಗೊಳ್ಳದಿದ್ದರೂ, ಪರಸ್ಪರ ಶುಭ ಹಾರೈಸಬಹುದು. ಸಂತೋಷದಲ್ಲಿ ಸಹಭಾಗಿಗಳಾಗಬಹುದು ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಬಹುದು.

  ನಮ್ಮ ಧಾರ್ಮಿಕ ನಂಬಿಕೆಗಳು ಬೇರೆ ಬೇರೆಯಾಗಿರಬಹುದು. ಆದರೆ ಮಾನವೀಯತೆ, ಕರುಣೆ, ಸತ್ಯ, ನ್ಯಾಯ, ಶಾಂತಿ ಮತ್ತು ಪರೋಪಕಾರದಂತಹ ಮೌಲ್ಯಗಳು ಎಲ್ಲರಿಗೂ ಸಾಮಾನ್ಯವಾಗಿವೆ. ಭಿನ್ನಾಭಿಪ್ರಾಯಗಳಿಗಿಂತ ಮಾನವೀಯ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವ ಸಮಾಜವೇ ನಿಜವಾದ ಸುಸಂಸ್ಕೃತ ಸಮಾಜ.

  ಈ ದೀಪಾವಳಿಯ ಸಂದರ್ಭದಲ್ಲಿ ಪ್ರತಿಯೊಂದು ಮನೆಯಲ್ಲೂ ಸಂತೋಷ ನೆಲೆಸಲಿ. ಬಡತನ ಮತ್ತು ಸಂಕಷ್ಟಗಳು ದೂರ ಮಾಡುವ ಪ್ರಯತ್ನವಾಗಲಿ.  ರೋಗಿಗಳಿಗೆ ಆರೋಗ್ಯ ದೊರೆಯಲಿ, ಸಮಾಜದಲ್ಲಿ ದ್ವೇಷ ಮತ್ತು ಅಸಹನೆ ಕಡಿಮೆಯಾಗಿ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವ ಹೆಚ್ಚಾಗಲಿ.

  ಹಣತೆಯ ದೀಪದಿಂದ ಅಂಗಳದ ಕತ್ತಲೆಯನ್ನು ಹೋಗಲಾಡಿಸುವಂತೆ, ಮಾನವೀಯತೆಯ ದೀಪದಿಂದ ಹೃದಯದಲ್ಲಿ ಕವಿದಿರುವ ಕತ್ತಲೆಯನ್ನು ಹೋಗಲಾಡಿಸಬಹುದು.

  ಬೆಳಕು ಪ್ರತಿಯೊಬ್ಬರ ಬದುಕಿನಲ್ಲೂ ಮೂಡಲಿ. ಸಂತೋಷ ಪ್ರತಿಯೊಂದು ಮನೆಯಲ್ಲೂ ನೆಲೆಸಲಿ. ಮಾನವೀಯತೆ ಪ್ರತಿಯೊಬ್ಬರ ಹೃದಯದಲ್ಲೂ ಬೆಳಗಲಿ.

ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯ ಜೀವನ ಲಭಿಸಲಿ ಎಂಬ ಹಾರೈಕೆಗಳೊಂದಿಗೆ.

ದೀಪಾವಳಿಯ ಅಂಗವಾಗಿ ವಿಶೇಷ ಲೇಖನ : ಅನ್ವರ್ ಅಲಿ  ಕಾಪು.

Leave a comment

Your email address will not be published. Required fields are marked *

eMedia Kannada  @2025. All Rights Reserved.