ಕಾಪು ಕಾಂಗ್ರೆಸ್ ನಿಂದ ರಾಜೀವ್ ಭವನದಲ್ಲಿ ಸೌಹಾರ್ದ ದೀಪಾವಳಿ ಆಚರಣೆ
ದೀಪಾವಳಿ ಹಬ್ಬ ಒಗ್ಗಟ್ಟಿನಿಂದ ಬದುಕುವ ಸಂದೇಶ ಸಾರುತ್ತದೆ: ಮಾಜಿ ಸಚಿವ ಸೊರಕೆ
(Kaup) ಕಾಪು : ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಮತ್ತು ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಕಾಪುವಿನ ರಾಜೀವ ಭವನದಲ್ಲಿ ಸೌಹಾರ್ದ ದೀಪಾವಳಿ ಆಚರಣೆ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು.
ಅವರು ಮಾತನಾಡಿ, ಸಾಮರಸ್ಯ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮೌಲ್ಯಗಳು ಪ್ರತಿಯೊಬ್ಬರ ಬದುಕಿನಲ್ಲಿ ಸದಾ ಬೆಳಗಬೇಕು. ಬೆಳಕಿನ ಹಬ್ಬ ದೀಪಾವಳಿ ಧರ್ಮ, ಜಾತಿ ಭೇದಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತೆ ಹಾಗೂ ಒಗ್ಗಟ್ಟಿನಿಂದ ಬದುಕುವ ಸಂದೇಶ ಸಾರುತ್ತದೆ ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎ.ಎ. ಗಫೂರ್ ಮಾತನಾಡಿ, ತ್ಯಾಗ, ಸೇವೆ ಮತ್ತು ಮಾನವೀಯ ಮೌಲ್ಯಗಳು ಸಮಾಜದಲ್ಲಿ ಹೆಚ್ಚಾಗಬೇಕು. ಎಲ್ಲ ಧರ್ಮಗಳ ಹಬ್ಬಗಳೂ ಪ್ರೀತಿ, ಸೌಹಾರ್ದತೆ ಮತ್ತು ಸಹೋದರತೆಯ ಸಂದೇಶ ಸಾರುತ್ತವೆ ಎಂದು ನುಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ಶುಭಾಶಂಸನೆಗೈದರು.
ದೀಪಾವಳಿ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುರಸಭೆಯ ಪೌರ ಕಾರ್ಮಿಕರನ್ನು ಸಮ್ಮಾನಿಸಿ, ವಿವಿಧ ಆಶ್ರಮಗಳಿಗೆ ಸಿಹಿ ತಿಂಡಿ, ಬಟ್ಟೆ ಬರೆ ಹಾಗೂ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಅಲೆವೂರು, ಕಾಪು ಉದ್ಯೋಗ ಮೇಳದ ಸಂಯೋಜಕ ಶ್ರೀನಿವಾಸ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶರ್ಫುದ್ದೀನ್ ಶೇಖ್, ಮಹಿಳಾ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ಜೇಬಾ ಸೆಲ್ವನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಿಯಾಜ್, ಪ್ರಮುಖರಾದ, ನವೀನ್ ಎನ್ ಶೆಟ್ಟಿ, ಗಣೇಶ್ ಕೋಟ್ಯಾನ್ ಪಡುಬಿದ್ರಿ, ಅಶೋಕ್ ನಾಯರಿ, ಸುಚರಿತ ಅಮೀನ್, ಗೀತಾ ವಾಗ್ಲೆ, ರಿಯಾಜ್ ಮುದರಂಗಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಧನ್ಯಾ, ಪ್ರೇಮಾ, ಯಶ್ಚಿತಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು. ಅವರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಪು ಪುರಸಭೆಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಕಾಪು ತಾಲ್ಲೂಕು ವ್ಯಾಪ್ತಿಯ ಮೂರು ವೃದ್ಧಾಶ್ರಮಗಳಿಗೆ ಬಟ್ಟೆಬರೆ, ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಅಂಗನವಾಡಿ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಲಾಯಿತು.
ಸೌಹಾರ್ಧ ದೀಪಾವಳಿ ಹಬ್ಬ ಆಚರಣೆಯ ರುವಾರಿ, ಕಾಪು ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು ಸ್ವಾಗತಿಸಿ, ಪ್ರಸ್ತಾವನೆಗೈದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ ವಂದಿಸಿದರು. ಸಂತೋಷ್ ಕುಮಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

