ದೀಪಾವಳಿ ವೇಳೆಗೆ ಎಲ್ಲ ಅರ್ಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
(Bengaluru) ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಗಳಿಗೆ ತರಬೇತಿ ನೀಡಲಾಗುತ್ತಿದೆ. ದೀಪಾವಳಿ ವೇಳೆಗೆ ಎಲ್ಲ ಫಲಾನುಭವಿಗಳಿಗೂ ಹಣ ತಲುಪಲಿದೆ. ಆ.15ರೊಳಗೆ ನೋಂದಣಿ ಮಾಡಿಕೊಂಡಿದ್ದೂ ದುಡ್ಡು ಬಾರದಿದ್ದರೆ, 3 ತಿಂಗಳ ಬಾಕಿ ಸೇರಿಸಿ ಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಬಿಡಬ್ಲ್ಯುಎಸ್ಎಸ್ಬಿ ಕಚೇರಿಯಲ್ಲಿರುವ ಬೆಂಗಳೂರು ಒನ್ ಕೇಂದ್ರದಲ್ಲಿ ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತರಬೇತಿ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು.
ಗೃಹಲಕ್ಷ್ಮಿ ಯೋಜನೆ ಕುರಿತು ಆಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು. ತಾಂತ್ರಿಕ ದೋಷ, ಸಿಬಂದಿಯ ತೊಡಕಿನ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದುವರೆಗೆ ಗೃಹಲಕ್ಷ್ಮಿ ಯೋಜನೆ ಶೇ. 95ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆ ಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ನೋಂದಾಯಿತ ಮಹಿಳೆಯರಿಗೆ ಹಣ ಜಮೆ:-
ಇದುವರೆಗೆ ಯೋಜನೆಗೆ 1.16 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದು, ಈ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2,199 ಕೋಟಿ ರೂ. ಜಮೆ ಆಗಿದೆ. ಈ ಮೂಲಕ ಶೇ.97ರಷ್ಟು ಡಿಬಿಟಿ ಮುಖಾಂತರ ಹಣ ಹಾಕಲಾಗಿದೆ. ಆಗಸ್ಟ್ನಲ್ಲಿ 5 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ (Technical Problem) ಹಣ ಹೋಗಿಲ್ಲ. ಸೆಪ್ಟಂಬರ್ನಲ್ಲಿ ಶೇ.82ರಷ್ಟು ಕುಟುಂಬಗಳಿಗೆ ಹಣ ಹಾಕಲಾಗಿದ್ದು, 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್ ಖಾತೆಯಲ್ಲೇ ಉಳಿದಿದೆ. ಅಕ್ಟೋಬರ್ನಲ್ಲಿ 2400 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
10 ದಿನಗಳಲ್ಲಿ ಬಗೆಹರಿಯಲಿದೆ ಗೊಂದಲ
ಆ.15ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೆ ಇದ್ದರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ದೀಪಾವಳಿ ಹಬ್ಬದ ವೇಳೆಗೆ ಎಲ್ಲ ಫಲಾನುಭವಿಗಳಿಗೆ ಹಣ ತಲುಪುವಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಇನ್ನು 10 ದಿನಗಳಲ್ಲಿ ಯೋಜನೆಯ ಗೊಂದಲಗಳು ಬಗೆಹರಿಯಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.

