ನಕಲಿ ದಾಖಲೆ ಸೃಷ್ಟಿಸಿ ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ರೂ. 45 ಲಕ್ಷ ಹಣ ಸಾಲ, ದೂರು
(Katapadi) ಕಟಪಾಡಿ: ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ 45 ಲಕ್ಷ ಹಣ ಪಡೆದ ಘಟನೆ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಯಾನತ್ ಬಾನು ಹಾಗೂ ಆಕೆಯ ಗಂಡ ನೂಮನ್ ಇಸ್ಮಾಯಿಲ್ ಎಂಬವರು ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ಸ್ಥಿರಾಸ್ತಿ ಖರೀದಿಸಲು ರೂ. 45 ಲಕ್ಷ ಸಾಲ ಪಡೆದಿದ್ದು, ದಿನೇಶ್ ಮತ್ತು ರಾಜೇಶ್ ಎಂಬವರು ಜಾಮೀನುದಾರರಾಗಿದ್ದಾರೆ.
ಸಾಲ ಪಡೆದ ಆರೋಪಿಗಳು ಮೂರು ತಿಂಗಳ ಮಾಸಿಕ ಕಂತನ್ನೂ ಸಂಘಕ್ಕೆ ಪಾವತಿಸಿದ್ದು, ನಂತರದ ಕಂತನ್ನು ಪಾವತಿ ಮಾಡದೇ ಇದ್ದ ಕಾರಣ ಆರೋಪಿಗಳ ಮೇಲೆ ಅನುಮಾನ ಬಂದು ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ, ಆರೋಪಿಗಳು ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ಸಾಲ ತೆಗೆದು ಕೊಳ್ಳುವ ಉದ್ದೇಶಕ್ಕಾಗಿ ಸರಕಾರಿ ಅಧಿಕಾರಿಗಳ ಪೋರ್ಜರಿ ದಾಖಲೆ, ಸಹಿ, ಮೊಹರುಗಳನ್ನು ಬಳಸಿಕೊಂಡು ಸುಳ್ಳು ದಾಖಲೆಗಳನ್ನು ತಯಾರಿಸಿ ದುರ್ಬಳಕೆ ಮಾಡಿಕೊಂಡಿದ್ದು ತಿಳಿದು ಬಂದಿದೆ.
ಆರೋಪಿಗಳು ಬ್ಯಾಂಕಿಗೆ ಹಾಜರು ಪಡಿಸಿದ ಬನ್ನಂಜೆಯ ಜಾಗದ ಕ್ರಯಚೀಟಿಯ ದಸ್ತಾವೇಜು, ಒಪ್ಪಂದಕಾರರು, ಉಪ ನೋಂದಣಾ ಅಧಿಕಾರಿಯ ಸಹಿ, ಅವರ ಆಫೀಸಿನ ಮೊಹರು, ಋಣ ಭಾರ ಪತ್ರ, ಅದರಲ್ಲಿರುವ ರೆವೆನ್ಯು ಅಧಿಕಾರಿಗಳ ಸಹಿ, ಮೊಹರು ಎಲ್ಲವೂ ಪೋರ್ಜರಿ ಎಂಬ ಅಂಶ ಬಯಲಿಗೆ ಬಂದಿದೆ.
ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘ, ಸಹಕಾರ ಸೌಧದ ಶಾಖೆಯ ಪ್ರಧಾನ ವ್ಯವಸ್ಥಾಪಕ ನೀಡಿದ ದೂರಿನಂತೆ ನಾಲ್ವರ ಮೇಲೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

