ನಮ್ಮ ದೇವಳಗಳ ಮೇಲೆ ಸರಕಾರದ ಆಳ್ವಿಕೆ ಸಾಧ್ಯವಿಲ್ಲ: ಪಡುಬಿದ್ರಿಯಲ್ಲಿ ಹಿಂದೂ ಸಮಾವೇಶ ಉದ್ಘಾಟಿಸಿ ಆನೆಗುಂದಿ ಸ್ವಾಮೀಜಿ
(Padubidri) ಪಡುಬಿದ್ರಿ : ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ ಸರಕಾರದ ಆಳ್ವಿಕೆ ಸಲ್ಲದು. ದೇವಳಗಳು ಜಾತ್ಯಾತೀತ ಕೇಂದ್ರಗಳಲ್ಲ. ಅದು ನಮ್ಮ ಶ್ರದ್ಧಾ ಕೇಂದ್ರಗಳು. ಸರಕಾರ ಹಿಡಿತ ಸಾಧಿಸುವುದೇ ಆದಲ್ಲಿ, ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳನ್ನು ಸರಕಾರದ ಅಧೀನಕ್ಕೆ ತರಲಿ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರು ಹೇಳಿದರು.
ಪಡುಬಿದ್ರಿ ಬಂಟರ ಭವನದಲ್ಲಿ ಕಾಪು ತಾಲೂಕು ವಿಶ್ವ ಹಿಂದೂ ಪರಿಷದ್‌ನ ಷಷ್ಠಿಪೂರ್ತಿ ವರ್ಷದ ಅಂಗವಾಗಿ ನಡೆದ ಹಿಂದೂ ಸಮಾವೇಶ ಉದ್ಘಾಟಿಸಿ ಸ್ವಾಮೀಜಿ ಆರ್ಶೀವಚಿಸಿದರು.
ನಮ್ಮ ಆಚರಣೆ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಮಕ್ಕಳಿಗೆ ಈ ಬಗ್ಗೆ ಮಾಹಿತಿ ಅಗತ್ಯ. ತಪ್ಪಿದಲ್ಲಿ ಬಹಳ ಕಷ್ಟವಿದೆ. ವೇಷ ಭೂಷಣಗಳಲ್ಲೂ ಸಂಪ್ರದಾಯ ಅಗತ್ಯವಿದೆ. ನಮ್ಮ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡಲೇಬೆಕು ಎಂದವರು ಹೇಳಿದರು.
ನಮ್ಮ ಉಳಿವಿಗಾಗಿ ನವು ಪ್ರಯತ್ನ ಮಾಡಲೇಬೇಕಾಗಿದೆ. ಅದಕ್ಕಾಗಿ ಒಗ್ಗಟ್ಟಿನ ಅವಶ್ಯಕತೆ ಇದೆ. ನಮ್ಮ ಅಚರಣೆಗಳು ಚೌಕಟ್ಟಿನೊಳಗಿದ್ದರೆ ಸುರಕ್ಷಿತವಾಗಿರುತ್ತೇವೆ. ಆರ್ಥಿಕವಾಗಿ ನಮ್ಮಲ್ಲೇ ವ್ಯವಹಾರದ ಅಗತ್ಯವಿದೆ ಎಂದವರು ಹೇಳಿದರು.
ದಿಕ್ಸೂಚಿ ಭಾಷಣಗೈದ ವಿಶ್ವ ಹಿಂದೂ ಪರಿಷದ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ಮಾತನಾಡಿ, ವಿಶ್ವ ಹಿಂದೂ ಪರಿಷದ್ ೬೦ ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಲೇ ಬಂದಿದೆ. ಹೋರಾಟವೇ ನಮಗೆ ಶ್ರೀರಕ್ಷೆ. ಸಮಾಜವನ್ನು ಸುಭದ್ರವಾಗಿ ಕಟ್ಟುವ ಜವಾಬ್ದಾರಿ ಸಂಘಟನೆಯ ಮೇಲಿದೆ. ನಾವು ಒಗ್ಗಟ್ಟಾದರೆ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದರು.
ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಪ್ರಸ್ತಾವಿಸಿ ಸಮಾಜದ ಒಗ್ಗಟ್ಟಿಗೆ ಕರೆ ನೀಡಿದರು.
ಧಾರ್ಮಿಕ ಚಿಂತಕರಾದ ಶಶಿಧರ್ ಶೆಟ್ಟಿ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಗೋಪಾಲ ಪೂಜಾರಿ ಶಿರ್ವ, ದೈವನರ್ತಕರಾದ ಸುಧಾಕರ ಪಾಣಾರ ಮೂಡುಬೆಳ್ಳೆ, ಆಯುರ್ವೇದ ವೈದ್ಯೆ ಡಾ. ಪಯಸ್ವಿನಿ ಶೆಟ್ಟಿಗಾರ್, ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ವಿಎಚ್‌ಪಿ ಕಾಪು ತಾಲೂಕು ಉಪಾಧ್ಯಕ್ಷ ಅಜಿತ್ ಶೆಟ್ಟಿ ಪಡುಬಿದ್ರಿ ಉಪಸ್ಥಿತರಿದ್ದರು.
ಕಾಪು ತಾಲೂಕು ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಜಯಪ್ರಕಾಶ್ ಪ್ರಭು ಸ್ವಾಗತಿಸಿದರು. ಪ್ರಾಜ್ಞ ವಂದೇ ಮಾತರಂ ಹಾಡಿದರು. ಸಾಮೂಹಿಕವಾಗಿ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಸಲಾಯಿತು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು. ವಿಎಚ್‌ಪಿ ತಾಲೂಕು ಕಾರ್ಯದರ್ಶಿ ರಾಜೇಂದ್ರ ಶೆಣೈ ವಂದಿಸಿದರು.

