ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ
(New Dhelhi) ನವದೆಹಲಿ : ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜವಾಹರಲಾಲ್ ನೆಹರು ನಂತರ ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ಎರಡನೇ ಪ್ರಧಾನಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.
ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಜೊತೆಗೆ ಬಿಜೆಪಿಯ ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಐದು ವರ್ಷಗಳ ನಂತರ ಸಂಪುಟಕ್ಕೆ ಮರಳಿದರೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹರ್ಯಾಣದ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಮೋದಿ ಸಂಪುಟದಲ್ಲಿ ಹೊಸ ಮುಖಗಳಾಗಿದ್ದಾರೆ.
ಬಿಜೆಪಿ ನಾಯಕರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದರ್ ಯಾದವ್ ಅವರು ಈ ಹಿಂದೆ ರಾಜ್ಯಸಭೆಯಲ್ಲಿದ್ದರು. ಆದರೆ, ಈಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ, ಅವರು ಸಚಿವರಾಗಿ ಮೋದಿ ಉಳಿಸಿಕೊಂಡವರ ಪಟ್ಟಿಯಲ್ಲಿ ಸೇರಿದ್ದಾರೆ.
ಬಿಜೆಪಿಯಿಂದ ಅಸ್ಸಾಂನ ಮಾಜಿ ಸಿಎಂ ಸರ್ಬಾನಂದ ಸೋನೊವಾಲ್, ಅಶ್ವಿನಿ ವೈಷ್ಣವ್, ವೀರೇಂದ್ರ ಕುಮಾರ್, ಪ್ರಲ್ಹಾದ್ ಜೋಶಿ, ಗಿರಿರಾಜ್ ಸಿಂಗ್ ಮತ್ತು ಜುಯಲ್ ಓರಾಮ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.
73 ವರ್ಷದ ಮೋದಿ ಅವರು ಮೊದಲು 2014 ರಲ್ಲಿ ಪ್ರಧಾನಿಯಾದರು. ನಂತರ 2019 ರಲ್ಲಿ ಮತ್ತಿ ೨೦೨೪ ರಲ್ಲಿ ಮತ್ತೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸಿದರು.
ಮೋದಿಯವರು ವಾರಣಾಸಿಯಿಂದ ಲೋಕಸಭೆಗೆ ಮರು ಆಯ್ಕೆಯಾಗಿದ್ದಾರೆ.
ಈ ಬಾರಿ ಸ್ವಂತವಾಗಿ ಬಹುಮತ ಪಡೆಯದ ಬಿಜೆಪಿ ಪಕ್ಷವು ತಮ್ಮ ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಅಧಿಕಾರ ನಡೆಸಲಿದೆ.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಎಚ್‌ಎಎಂ (ಜಾತ್ಯತೀತ) ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ಜೆಡಿಯು ನಾಯಕ ಲಾಲನ್ ಸಿಂಗ್ ಮತ್ತು ಟಿಡಿಪಿಯಕೆ ರಾಮ್ ಮೋಹನ್ ನಾಯ್ಡು ಕೂಡ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸ್ಪೀಕರ್ ಓಂಬಿರ್ಲಾ, ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್, ನಟ ಶಾರುಖ್ ಖಾನ್, ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ರಜನಿಕಾಂತ್, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಹಲವಾರು ವಿರೋಧ ಪಕ್ಷದ ನಾಯಕರು ಸಮಾರಂಭಕ್ಕೆ ಗೈರುಹಾಜರಾಗಿದ್ದರು.
ಭಾರತದ ನೆರೆಹೊರೆ ದೇಶಗಳಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಮತ್ತು ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿದ್ದರು.
ಹೊಸ ಸಂಸತ್ ಭವನ ನಿರ್ಮಾಣದಲ್ಲಿ ತೊಡಗಿರುವ ರಾಜಕೀಯ ಮುಖಂಡರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಕಾರ್ಮಿಕರು ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸುಮಾರು 9,000 ಜನರು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತದ್ದರು ಎಂದು ಅಂದಾಜಿಸಲಾಗಿದೆ.

