ನ. 6 : ಉಡುಪಿ ಗ್ರಾಮೀಣ ಬಂಟರ ಸಂಘದ ಆಯೋಜನೆಯಲ್ಲಿ 4ನೇ “ಬೃಹತ್ ಉದ್ಯೋಗ ಮೇಳ”
ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ
(Kaup) ಕಾಪು : ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಎಂ. ಆರ್.ಜಿ. ಗ್ರೂಪ್ ಪ್ರಯೋಜಕತ್ವದಲ್ಲಿ, 4ನೇ ಬಾರಿ ಬೃಹತ್ ಉದ್ಯೋಗ ಮೇಳವು ನ. 6ರ ಗುರುವಾರದಂದು ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಕುಂತಳನಗರ ಉಡುಪಿಯಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ಅವರು ಕಾಪು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಕಾಪು ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಉದ್ಯೋಗ ಮೇಳದಲ್ಲಿ ಕಾರ್ಪೊರೇಟ್ ಕಂಪನಿಗಳೂ ಸೇರಿದಂತೆ ಸುಮಾರು 40 ಕಂಪನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, 2000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭಿಸಲಿದೆ. ಸುಜ್ಲಾನ್ ಕಂಪನಿಗೆ ಮಾತ್ರವೇ ಸುಮಾರು 700 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ವಿವಿಧ ಲೊಕೇಶನ್‌ಗಳಲ್ಲಿ ಲಭ್ಯವಿದ್ದು, ಸುಮಾರು 250 ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಪೂರ್ಣಗೊಳಿಸಿದ ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ ನೀಡಲಾಗಿದೆ. ಇವರ ಸಂದರ್ಶನಗಳು ನವೆಂಬರ್ 6ರಂದು ನಡೆಯಲಿದ್ದು, ಮಹಿಳಾ ಅಭ್ಯರ್ಥಿಗಳಿಗಾಗಿ ನವೆಂಬರ್ 7ರಂದು ವಿಶೇಷ ದಿನ ಆಯೋಜಿಸಲಾಗಿದೆ.
ಅಭ್ಯರ್ಥಿಗಳು ನ. 6ರಂದು ಬೆಳಿಗ್ಗೆ 8-30 ಗಂಟೆಗೆ ಸ್ಥಳಕ್ಕೆ ಆಗಮಿಸಿ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ತಮ್ಮ ಆಸಕ್ತಿಯ ಪ್ರಕಾರ ಹಲವಾರು ಕಂಪನಿಗಳ ಸಂದರ್ಶನಗಳಲ್ಲಿ ಭಾಗವಹಿಸಲು ಅವಕಾಶವಿದೆ. ಈ ಕಂಪನಿಗಳಿಂದ ಸಂಜೆ 5 ಗಂಟೆಯವರೆಗೆ ಸಂದರ್ಶನ ನಡೆಯಲಿವೆ.
ಕಳೆದ ಮೂರು ವರ್ಷಗಳಲ್ಲಿ ನಡೆದ ಮೂರು ಉದ್ಯೋಗ ಮೇಳಗಳ ಮೂಲಕ 2100 ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಪಡೆದಿದ್ದಾರೆ. ಈ ಬಾರಿ ಸುಮಾರು 1500 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಮಹಿಳಾ ಅಭ್ಯ್ಯರ್ಥಿಗಳಿಗೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಬಾರಿ ದೊಡ್ಡ ಪ್ರಮಾಣದಲ್ಲಿ ಹಾಜರಾತಿ ನಿರೀಕ್ಷಿಸಲಾಗಿದೆ. ಸಂದರ್ಶನ ಪ್ರಕ್ರಿಯೆ ಸಂಪೂರ್ಣವಾಗಿ ಆಧುನಿಕ ಮತ್ತು ಪ್ರೊಫೆಷನಲ್ ರೀತಿಯಲ್ಲಿ ನಡೆಯಲಿದೆ.
ಜಾಬ್ ಫೇರ್ ಡ್ರೈವ್ ಚೇರ್ಮನ್ ಡಾ. ದಿವ್ಯರಾಣಿ ಪ್ರದೀಪ್ ಅವರು ಮಾತನಾಡುತ್ತಾ, ಇಂಜಿನಿಯರಿಂಗ್, ಡಿಪ್ಲೋಮಾ, ಐಟಿ, ಎಐ, ಎಂ.ಬಿ.ಎ., ಎಂ.ಕಾಂ., ಎಂ.ಸಿ.ಎ., ಬಿ.ಸಿ.ಎ., ಬಿ.ಕಾಂ., ಬಿ.ಎ., ಬಿ.ಎಸ್.ಸಿ., ಹೋಟೆಲ್ ಮ್ಯಾನೇಜ್ಮೆಂಟ್, ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಸೇರಿದಂತೆ ಎಲ್ಲಾ ವಿದ್ಯಾ ಕ್ಷೇತ್ರದ ಅಭ್ಯರ್ಥಿಗಳು ಈ ಮೇಳದಿಂದ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ವಿಜಿತ್ ಶೆಟ್ಟಿ , ಟ್ರಸ್ಟಿಗಳಾದ ಹರೀಂದ್ರ ಹೆಗ್ಡೆ ಕೊರಂಗ್ರಪಾಡಿ, ದಯಾನಂದ ಶೆಟ್ಟಿ, ಪದ್ಮನಾಭ ಹೆಗ್ಡೆ ಉಪಸ್ಥಿತರಿದ್ದರು.

