ಪಂಚವರ್ಣ ಯುವಕ ಮಂಡಲ : ರೈತರೆಡೆಗೆ ನಮ್ಮನಡಿಗೆ 52ನೇ ಸರಣಿ ಕಾರ್ಯಕ್ರಮ
ಕೃಷಿ ಕಾಯಕದಲ್ಲಿ ಹಿರಿಯ ತಲೆಮಾರಿನ ಕೊಡುಗೆ ಅನನ್ಯ – ಮಣೂರು ಭಾಸ್ಕರ ಶೆಟ್ಟಿ
(Kota) ಕೋಟ: ರೈತ ಕಾಯಕದಲ್ಲಿ ಹಿರಿಯ ತಲೆಮಾರಿನ ಕೊಡುಗೆ ಅನನ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಣೂರು ಭಾಸ್ಕರ್ ಶೆಟ್ಟಿ ಅಭಿಪ್ರಾಯಪಟ್ಟರು.
ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ಸ್ನೇಹಕೂಟ ಮಣೂರು ಸಂಸ್ಥೆಯ ಸಹಯೋಗದೊಂದಿಗೆ ೫೨ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿ, ಕೃಷಿ ಕ್ಷೇತ್ರದಲ್ಲಿ ದಾರೋಜ್ಜಿ ಮನೆ ಕುಟುಂಬಿಕರ ಪಾತ್ರ ಅತ್ಯಂತ ಗಣನೀಯ ಪಾತ್ರ ವಹಿಸಿದೆ. ಅದರಲ್ಲೂ ಆನಂದ ಕಾಂಚನ್ ಎಂಬ ಹಿರಿಯ ಕೃಷಿಕರನ್ನು ಪಂಚವರ್ಣದವರು ಗುರುತಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದ್ದಾರೆ.
ಒಂದು ಸರಕಾರ ಮಾಡಬೇಕಾದ ಕಾರ್ಯವನ್ನು ಪಂಚವರ್ಣ ಸಂಘಟನೆ ರೈತಾಪಿ ವರ್ಗಕ್ಕೆ ಮನೆಯಂಗಳಕ್ಕೆ ತೆರಳಿ ಪ್ರೋತ್ಸಾಹಿಸುವ ಕಾರ್ಯ ಅದರಲ್ಲೂ ನಿರಂತರವಾಗಿ ಸರಣಿ ಕಾರ್ಯಕ್ರಮದ ರೂಪದಲ್ಲಿ ನಿರ್ವಹಿಸುವುದು ಶ್ರೇಷ್ಠವಾದ ಕಾರ್ಯವಾಗಿದೆ ಎಂದರು.
ಇದೇ ವೇಳೆ ಹಿರಿಯ ಕೃಷಿಕ ದಾರೋಜ್ಜಿ ಮನೆ ಆನಂದ ಕಾಂಚನ್ ರವರನ್ನು ಕೃಷಿ ಪರಿಕರವನ್ನಿತ್ತು, ಕೃಷಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ತೆಕ್ಕಟ್ಟೆ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ ಪುರಸ್ಕಾರ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಕೋಟತಟ್ಟು ಪಡುಕರೆಯ ಪ್ರಗತಿಪರ ಕೃಷಿಕ ದಿವಾಕರ ಐತಾಳ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ, ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಸುಜಾತ ಕುಮಾರ್ ಪೂಜಾರಿ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಶಾಲಿನಿ ನರಸಿಂಹ ಸನ್ಮಾನ ಪತ್ರವಾಚಿಸಿದರು. ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಿಸಿದರು. ಮಾಜಿ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು.
ಪ್ರಾರಂಭದಲ್ಲಿ ಗೋ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

