ಪಕ್ಷಿಕೆರೆ : ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಭಟ್ ತಾಯಿ ಹಾಗೂ ಅಕ್ಕನನ್ನು ಬಂಧಿಸಿದ ಪೊಲೀಸರು
(Manglore) ಮಂಗಳೂರು: ಇಲ್ಲಿನ ಪಕ್ಷಿಕೆರೆಯಲ್ಲಿ ಪತ್ನಿ ಹಾಗೂ ಮಗುವನ್ನು ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿಕ್ ಭಟ್ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ರಾವ್ ಬಂಧಿತರಾಗಿದ್ದಾರೆ.
ಪಕ್ಷಿಕೆರೆಯ ಜಲಜಾಕ್ಷ ರೆಸಿಡೆನ್ಸಿಯ ಬಹು ಮಹಡಿ ಕಟ್ಟಡದಲ್ಲಿ ವಾಸವಿದ್ದ ಕಾರ್ತಿಕ್ ಭಟ್ (32) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಪ್ರಿಯಾಂಕ (28), ಮಗು ಹೃದಯ್ (4) ಹತ್ಯೆಗೀಡಾದ ದುರ್ದೈವಿಗಳು.
ಇದೀಗ ಕಾರ್ತಿಕ್ ಭಟ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ತಾಯಿ ಮತ್ತು ಮಗಳು ತಲೆ ತಿರುಗಿ ಬಿದ್ದಿದ್ದಾರೆ. ಅವರಿಗೆ ಮೂಡಬಿದ್ರೆ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೋಲಿಸರ ಮಾಹಿತಿ ಪ್ರಕಾರ ಮೃತ ಕಾರ್ತಿಕ್ ನಾಲ್ಕು ಪುಟಗಳ ಡೆತ್ ನೋಟ್ ನಲ್ಲಿ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪ್ರಸ್ತಾಪ ಮಾಡಿ ತಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.
ಕಾರ್ತಿಕ್ ಮತ್ತು ಪ್ರಿಯಾಂಕಾಳ ಮೊಬೈಲ್ ಗಳು ಶೌಚಾಲಯದ ಕೊಮೊಡ್ ನಲ್ಲಿ ಸಿಕ್ಕಿದ್ದು, ಈ ರೀತಿ ಯಾಕೆ ಮಾಡಿದ್ದಾರೆ ಎಂಬುವುದು ಇನಷ್ಟು ಸಂಶಯಕ್ಕೆ ಎಡೆ ಮಾಡಿದೆ.

