ಪಾಕಿಸ್ತಾನದ 9 ಸ್ಥಳಗಳ ಮೇಲೆ ಆಪರೇಷನ್ ಸಿಂಧೂರ್ ದಾಳಿ: ಭಾರತ ಹೇಳಿಕೆ
(New Dhelhi) ನವದೆಹಲಿ: ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತದಿಂದ ‘ಆಪರೇಷನ್ ಸಿಂಧೂರ್’ದಾಳಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಪ್ರಕಟಿಸಿದೆ.
ಕೆಲ ಹೊತ್ತಿನ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ್’ಅನ್ನು ಪ್ರಾರಂಭಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಯಿತು. ಅಲ್ಲಿಂದಲೆ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಿ, ನಿರ್ದೇಶಿಸಲಾಗಿತ್ತು ಎಂದು ಭಾರತೀಯ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಭಯೋತ್ಪಾದಕ ಮೂಲಸೌಕರ್ಯಗಳ ಮೇಲಿನ ಈ ನಿಖರ ದಾಳಿಗಳಲ್ಲಿ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಅದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ರಾತ್ರಿಯಿಡೀ ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು ಎಂದು ಅಸೋಸಿಯೇಟೆಡ್ ಪ್ರೆಸ್‌ಗೆ ಹೆಸರು ಬಹಿರಂಗಪಡಿಸಲು ಬಯಸದ ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಅದಾಗ್ಯೂ, ಪಾಕಿಸ್ತಾನದ ಸೇನೆಯು ಆರು ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆದಿದೆ ಎಂದು ಹೇಳಿದೆ. ಇವುಗಳಲ್ಲಿ ಬಹಾವಲ್ಪುರದಲ್ಲಿರುವ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್‌ನಲ್ಲಿರುವ ಸರ್ಜಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರ (ಎಲ್ಲವೂ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪು) ಸೇರಿವೆ.
ಮುರ್ಡಿಕೆಯಲ್ಲಿರುವ ಮರ್ಕಜ್ ತೈಬಾ, ಬರ್ನಾಲಾದ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಫರಾಬಾದ್‌ನ ಶ್ವಾವೈ ನಲ್ಲ ಶಿಬಿರ (ಎಲ್ಲವೂ ನಿಷೇಧಿತ ಲಷ್ಕರ್-ಎ-ತೈಬಾ) ಮತ್ತು ಕೋಟ್ಲಿಯಲ್ಲಿರುವ ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ಮೆಹ್ಮೂನಾ ಜೋಯಾ (ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ.
ನಮ್ಮ ಕ್ರಮಗಳು ಕೇಂದ್ರೀಕೃತವಾಗಿದ್ದು, ಅಳೆದು ತೂಗಿ ನಡೆಸಲಾಗಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಲಾಗಿಲ್ಲ. ಗುರಿಗಳ ಆಯ್ಕೆ ಮತ್ತು ದಾಳಿಯ ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಆಪರೇಷನ್ ಸಿಂಧೂರ್’ಅಡಿಯಲ್ಲಿ ನಡೆಸಲಾದ ದಾಳಿಗಳನ್ನು ಹೇಗೆ ನಡೆಸಲಾಯಿತು ಎಂಬ ವಿವರಗಳನ್ನು ಭಾರತವು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಮಂಗಳವಾರ ಮಧ್ಯರಾತ್ರಿಯ ನಂತರ ಮುಜಫರಾಬಾದ್ ನಗರದ ಸುತ್ತಮುತ್ತಲಿನ ಪರ್ವತಗಳ ಬಳಿ ಪಾಕಿಸ್ತಾನಿ ಆಕ್ರತಮಿತ ಕಾಶ್ಮೀರ ಪ್ರದೇಶದಲ್ಲಿ ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಹಲವಾರು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟಗಳ ನಂತರ ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದೇ ಕಾರಣಕ್ಕೆ ಮಧ್ಯರಾತ್ರಿ ಪಾಕಿಸ್ತಾನದ ಬೀದಿಗಳಲ್ಲಿ ಭಾರಿ ಜನಸಮೂಹ ಸೇರಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಬೆಳಗಿನ ಜಾವ 1:44 ಕ್ಕೆ ಈ ದಾಳಿ ನಡೆಸಲಾಯಿತು, ಇದರಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕ ಸೇರಿದಂತೆ 26 ಜನರು ಸಾವನ್ನಪ್ಪಿದರು. ದಾಳಿಗಳನ್ನು ಗಮನಿಸಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ತಮ್ಮ ದೇಶವು “ಈ ಯುದ್ಧ ಕೃತ್ಯಕ್ಕೆ ಬಲವಾಗಿ ಪ್ರತಿಕ್ರಿಯಿಸುವ ಎಲ್ಲ ಹಕ್ಕನ್ನು ಹೊಂದಿದೆ” ಎಂದು ಹೇಳಿದರು. “ಪಾಕಿಸ್ತಾನಿ ರಾಷ್ಟ್ರ ಮತ್ತು ಪಾಕಿಸ್ತಾನಿ ಸಶಸ್ತ್ರ ಪಡೆಗಳು ಶತ್ರುಗಳನ್ನು ಹೇಗೆ ಎದುರಿಸಬೇಕೆಂದು ತಿಳಿದಿವೆ. ಶತ್ರುಗಳು ತಮ್ಮ ದುಷ್ಕೃತ್ಯದ ಗುರಿಗಳಲ್ಲಿ ಯಶಸ್ವಿಯಾಗಲು ನಾವು ಎಂದಿಗೂ ಬಿಡುವುದಿಲ್ಲ”ಎಂದು ಅವರು ಹೇಳಿದರು.
“ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಪರಿಣಾಮಕಾರಿ ನಾಗರಿಕ ರಕ್ಷಣೆ”ಗಾಗಿ ದೇಶಾದ್ಯಂತ 244 ಜಿಲ್ಲೆಗಳಲ್ಲಿ ಯೋಜಿತ ಭದ್ರತಾ ಅಣಕು ವ್ಯಾಯಾಮಕ್ಕೆ ಗಂಟೆಗಳ ಮೊದಲು ಭಾರತದ ದಾಳಿಗಳು ಬಂದಿವೆ. ದಾಳಿಯ ಅಪರಾಧಿಗಳನ್ನು ಮತ್ತು ಅದರ ಪಿತೂರಿಯಲ್ಲಿ ಭಾಗವಹಿಸಿದವರನ್ನು “ಭೂಮಿಯ ತುದಿಯವರೆಗೆ” ಹಿಂಬಾಲಿಸಿ “ಅವರ ಕಲ್ಪನೆಗೂ ಮೀರಿದ”ಶಿಕ್ಷೆಯನ್ನು ವಿಧಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದ್ದಾರೆ.
ಅಧಿಕೃತ ಪತ್ರಿಕಾಗೋಷ್ಠಿ ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ವರದಿಗಳ ಪ್ರಕಾರ, ಹಿರಿಯ ಭಾರತೀಯ ಅಧಿಕಾರಿಗಳು ದಾಳಿಯ ಕುರಿತು ಹಲವಾರು ದೇಶಗಳಲ್ಲಿನ ತಮ್ಮ ಸಹವರ್ತಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇಶಗಳಲ್ಲಿ ಅಮೆರಿಕ, ಯುಕೆ, ಸೌದಿ ಅರೇಬಿಯಾ, ಯುಎಇ ಮತ್ತು ರಷ್ಯಾ ಸೇರಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕ ಎನ್‌ಎಸ್‌ಎ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತನಾಡಿ, ಭಾರತ ಕೈಗೊಂಡ ಕ್ರಮಗಳ ಕುರಿತು ವಿವರಿಸಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಾಚರಣೆಯನ್ನು ಭಾರತೀಯ ಸೇನೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿವೆ ಎಂದು ಮೂಲಗಳು ಸೂಚಿಸಿವೆ. ಅವರು ನಿರ್ದಿಷ್ಟ ವಿವರಗಳನ್ನು ನೀಡದಿದ್ದರೂ, ದಾಳಿಗಳಲ್ಲಿ “ಸ್ಟ್ಯಾಂಡ್‌ಆಫ್” ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.

