ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ
(Bantakal) ಬಂಟಕಲ್: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್), ಯುವ ರೆಡ್ ಕ್ರಾಸ್ ಘಟಕ, ರೋಟರ‍್ಯಾಕ್ಟ್ ಕ್ಲಬ್, ರಕ್ತ ಕೇಂದ್ರ, ಕಸ್ತೂರ್‌ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕಸ್ತೂರ್‌ಬಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಿಸ್ಮಿತಾ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿ, ಆರೋಗ್ಯವಂತ ವ್ಯಕ್ತಿಯು ಪ್ರತೀ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡಬಹುದೆಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ಸಂಸ್ಥೆಯಿಂದ ನಿರಂತರ ಬೆಂಬಲವಿದೆ ಎಂದ ಅವರು, ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ನಿಸ್ವಾರ್ಥ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್), ಯುವ ರೆಡ್ ಕ್ರಾಸ್ ಘಟಕ, ರೋಟರ‍್ಯಾಕ್ಟ್ ಕ್ಲಬ್ ಮತ್ತು ಕಸ್ತೂರ್‌ಬಾ ಆಸ್ಪತ್ರೆ ಮಣಿಪಾಲ ಇವರನ್ನು ಅಭಿನಂದಿಸಿದರು.
ಡಾ. ನಾಗರಾಜ್ ಭಟ್ ಡೀನ್ ಅಕಾಡೆಮಿಕ್, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೋಟರ‍್ಯಾಕ್ಟ್ ಕ್ಲಬ್‌ನ ಸಂಯೋಜಕರಾದ ನಾಗರಾಜ್ ರಾವ್, ಡಾ. ಸುದರ್ಶನ್ ರಾವ್, ಡೀನ್(ಆಂತರಿಕ ಗುಣಮಟ್ಟ ಕೋಶ) ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಸಿಬ್ಬಂದಿಗಳು ಮತ್ತು ವಿಧ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಆಕಾಶ್ ಪ್ರಾರ್ಥಿಸಿದರು. ಆದಿತ್ಯ ಪ್ರಕಾಶ್ ಸ್ವಾಗತಿಸಿದರು. ಅನಘಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಧೀರಜ್ ವಂದಿಸಿದರು.
ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ಸೇರಿ ಒಟ್ಟು ೧೧೦ ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

