• Home  
  • ಬಿಜೆಪಿಗರಿಗೆ ಪ್ರೊಟೋಕಾಲ್ ಪದದ ಅರ್ಥ ಗೊತ್ತಿಲ್ಲ: ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ  
- ರಾಜಕೀಯ

ಬಿಜೆಪಿಗರಿಗೆ ಪ್ರೊಟೋಕಾಲ್ ಪದದ ಅರ್ಥ ಗೊತ್ತಿಲ್ಲ: ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ  

Share: ಬಿಜೆಪಿಗರಿಗೆ ಪ್ರೊಟೋಕಾಲ್ ಪದದ ಅರ್ಥ ಗೊತ್ತಿಲ್ಲ: ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ   ಕುಂದಾಪುರ: ಸರ್ಕಾರಿ ಶಿಷ್ಟಾಚಾರ (ಪ್ರೊಟೋಕಾಲ್) ಎನ್ನುವ ಪದದ‌ ಅರ್ಥವೇ ಗೊತ್ತಿಲ್ಲದ ಬಿಜೆಪಿ ಪಕ್ಷದ ಕೆಲ ಮುಖಂಡರು, ಶಿಷ್ಟಾಚಾರದ ಹೆಸರಲ್ಲಿ ಕಾಂಗ್ರೆಸ್ ನಾಯಕರು ಸರಕಾರಿ ಕಾರ್ಯಕ್ರಮದ ವೇದಿಕೆ ಏರುವುದಕ್ಕೆ ಆಕ್ಷೇಪ ತೋರುತ್ತಿರುವುದು ಹಾಸ್ಯಾಸ್ಪದ ಹಾಗೂ ಬಾಲಿಶ ವರ್ತನೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಯ ಸರಕಾರಿ ಕಾರ್ಯಕ್ರಮಗಳಲ್ಲಿ […]

ಬಿಜೆಪಿಗರಿಗೆ ಪ್ರೊಟೋಕಾಲ್ ಪದದ ಅರ್ಥ ಗೊತ್ತಿಲ್ಲ: ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ  

ಕುಂದಾಪುರ: ಸರ್ಕಾರಿ ಶಿಷ್ಟಾಚಾರ (ಪ್ರೊಟೋಕಾಲ್) ಎನ್ನುವ ಪದದ‌ ಅರ್ಥವೇ ಗೊತ್ತಿಲ್ಲದ ಬಿಜೆಪಿ ಪಕ್ಷದ ಕೆಲ ಮುಖಂಡರು, ಶಿಷ್ಟಾಚಾರದ ಹೆಸರಲ್ಲಿ ಕಾಂಗ್ರೆಸ್ ನಾಯಕರು ಸರಕಾರಿ ಕಾರ್ಯಕ್ರಮದ ವೇದಿಕೆ ಏರುವುದಕ್ಕೆ ಆಕ್ಷೇಪ ತೋರುತ್ತಿರುವುದು ಹಾಸ್ಯಾಸ್ಪದ ಹಾಗೂ ಬಾಲಿಶ ವರ್ತನೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಯ ಸರಕಾರಿ ಕಾರ್ಯಕ್ರಮಗಳಲ್ಲಿ ಎಲ್ಲೂ ಬಿಜೆಪಿ ಪಕ್ಷದ ಮುಖಂಡರು ಶಿಷ್ಟಾಚಾರ ಬಿಟ್ಟು ಭಾಗಿಯಾಗಿಲ್ಲ ಎಂದು ಬಿಜೆಪಿಗರು ಮೊದಲು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಲಿ.

 ಜಿಲ್ಲೆಗೆ ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳು ಬಂದಾಗ ಪಾಲನೆ ಮಾಡಲಾದ ಶಿಷ್ಟಾಚಾರದ ಬಗ್ಗೆಯೂ ಒಮ್ಮೆ ಗಮನಹರಿಸಲಿ.

 ಮುಳ್ಳಿಕಟ್ಟೆಯಲ್ಲಿ ನಡೆದ ಮುಖ್ಯಮಂತ್ರಿಗಳ, ಮಂಗಳೂರಿನಲ್ಲಿ ನಡೆದ ಪ್ರಧಾನ ಮಂತ್ರಿಗಳ ಹಾಗೂ ಪುತ್ತೂರಿನಲ್ಲಿ ನಡೆದ ಕೇಂದ್ರ ಗ್ರಹ ಸಚಿವರ‌ ಸರಕಾರಿ ಕಾರ್ಯಕ್ರಮಗಳಲ್ಲಿ‌ ಸರ್ಕಾರದ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ ಎನ್ನುವುದನ್ನು ಬಿಜೆಪಿ ಪಕ್ಷದ ಮುಖಂಡರು ಸಾರ್ವಜನಿಕವಾಗಿ ತಿಳಿಸುವಂತೆ ಅವರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮಗಳು ನಡೆಯಬೇಕಾದರೂ, ಜಿಲ್ಲಾಡಳಿತ ಹಾಗೂ ಆಯಾ ಇಲಾಖೆಯ ಜಿಲ್ಲಾ ಅಧಿಕಾರಿಗಳೇ ಆಮಂತ್ರಣ ಪತ್ರಿಕೆ, ಕಾರ್ಯಕ್ರಮ ನಿರೂಪಣೆ ಸೇರಿದಂತೆ ಶಿಷ್ಟಾಚಾರ ಪಾಲನೆಯ‌ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ.

 ಈ ಹಿಂದಿನ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇಳೆ ಜಾಣ ಕುರುಡುತನಕ್ಕೆ ಮೌನಿಯಾಗಿದ್ದ, ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಇದೀಗ ಗ್ರಾಮ ಪಂಚಾಯಿತಿ ಕಾರ್ಯಕ್ರಮ ಒಂದರಲ್ಲಿ ರಾಜಕೀಯ ಕಾರಣಕ್ಕಾಗಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಹೊಣೆಗಾರಿಕೆ ಜಾರಿಸಿಕೊಂಡು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸರಿಯಲ್ಲ. ಒಂದು ವೇಳೆ ಶಿಷ್ಟಾಚಾರ ಉಲ್ಲಂಘನೆ ಆಗಿದ್ದಲ್ಲಿ ಇದಕ್ಕೆ ಆ ಇಲಾಖೆಯ ಜಿಲ್ಲಾ ಅಧಿಕಾರಿಯೇ ನೇರ ಹೊಣಿಗಾರರಾಗಿರುತ್ತಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಜೊತೆಯಲ್ಲಿ ಸ್ಥಳೀಯ ಪ್ರಮುಖರನ್ನ, ದಾನಿಗಳನ್ನು, ಧಾರ್ಮಿಕ ಮುಖಂಡರನ್ನು, ಒಳ್ಳೆಯ ವಾಗ್ಮಿಗಳನ್ನು ಪಕ್ಷಾತೀತವಾಗಿ ಕರೆಯುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗಲೂ ಆಮಂತ್ರಣ ಪತ್ರಿಕೆಯಲ್ಲಿ ಇಲ್ಲದ ಜಿಲ್ಲೆಯ ಕೆಲವು ರಾಜಕೀಯ ಹಿರಿಯ ಮುಖಂಡರು ವೇದಿಕೆ ಹಂಚಿಕೊಂಡಿರುವ, ಕೇಂದ್ರ ಸಚಿವೆಯೊಬ್ಬರ ಜೊತೆ ಜಿಲ್ಲೆಯ ಮಹಿಳಾಮಣಿಯೊಬ್ಬರು ಪದೆ ಪದೆ ವೇದಿಕೆ ಏರಿರುವ ಉದಾಹರಣೆಗಳು ನಮ್ಮ ಮುಂದಿದೆ. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲ ರಾಜಕೀಯ ಪಕ್ಷಗಳ ಅಧಿಕಾರಾವಧಿಯಲ್ಲಿಯೂ ನಡೆದಿದೆ. ಹಾಗಂತ ಈವರೆಗೂ ಯಾರು ಪ್ರೋಟೋಕಾಲ್ ಎಂದು ಗುಲ್ಲೆಬ್ಬಿಸಿಲ್ಲ. ಆದರೆ ಜಿಲ್ಲೆಯಲ್ಲಿ ಕೆಲವೊಂದು ಕಡೆ ಕೆಲ ಬಿಜೆಪಿ ಶಾಸಕರು, ಕಾಂಗ್ರೆಸ್ ನಾಯಕರು ಸರ್ಕಾರಿ ಕಾರ್ಯಕ್ರಮದ ವೇದಿಕೆ ಏರಲು ವಿರೋಧ ವ್ಯಕ್ತ ಮಾಡುತ್ತಿದ್ದಾರೆ. ಇದಕ್ಕೆ ಅವರು ಅನುಭವದ ಕೊರತೆ ಹಾಗೂ ಸಣ್ಣ ಮನಸ್ಥಿತಿಯೇ ಕಾರಣ. ಸಾಮಾನ್ಯ ಜ್ಞಾನವಿಲ್ಲದ, ಪೂರ್ವಾಗ್ರಹ ಪೀಡಿತ ರಾಜಕೀಯ ಕೃಪಾಪೋಷಿತ ಕೆಲ ಅಧಿಕಾರಿಗಳು ಪ್ರೊಟೋಕಾಲ್ ನೆಪದಲ್ಲಿ ಕಾಂಗ್ರೆಸ್ ಮುಖಂಡರನ್ನು ವೇದಿಕೆ ಏರಿದಂತೆ ಹುನ್ನಾರ ನಡೆಸುತ್ತಿರುವುದು ಕಂಡು ಬರುತ್ತಿದೆ. ಇದು ಹೀಗೆ ಮುಂದುವರಿದರೆ, ಈ ಅಧಿಕಾರಿಯ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಸರಕಾರಿ  ಕಾರ್ಯಕ್ರಮಗಳಲ್ಲಿನ ಶಿಷ್ಟಾಚಾರ ಪಾಲನೆಯ ಕುರಿತಂತೆ ಸಮಗ್ರ ತನಿಖೆಗೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಬೇಕಾಗುತ್ತದೆ ಹಾಗೂ ಶಿಷ್ಟಾಚಾರದ ಹೆಸರಿನಲ್ಲಿ ಆಡಳಿತ ಪಕ್ಷದ ಮುಖಂಡರಗಳನ್ನು ಕಾರ್ಯಕ್ರಮದಿಂದ ದೂರವಿಡುವ ವ್ಯವಸ್ಥಿತ ಹುನ್ನಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕೆ.ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.