ಬಿಪಿಎಲ್ ಕಡಿತವೇ ಕಾಂಗ್ರೆಸ್ ಸರ್ಕಾರದ ಸಾಧನೆ – ವಿಜಯ ಕೊಡವೂರ್
ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ ಭಾಜಪ ಹಿಂದುಳಿದ ವರ್ಗಗಳ ಮೋರ್ಚಾ
(Udupi) ಉಡುಪಿ: ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸರಕಾರವು ಜಿಲ್ಲೆಯಾದ್ಯಂತ ಬಡವರ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತನೆ ಮಾಡುತ್ತಿದ್ದು, ಇದರಿಂದ ಬಡವರಿಗೆ ತೊಂದರೆ ಆಗುತ್ತಿದ್ದು ಎಂದು ಆರೋಪಿಸಿ ಉಡುಪಿಯ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿಯಾಗಿ ಸರಕಾರ ಪರಿವರ್ತನೆ ಮಾಡುತ್ತಿರುವುದರಿಂದ ಹಿಂದುಳಿದ ವರ್ಗಗಳ ಬಡವರಿಗೆ ಮತ್ತು ಶ್ರಮಿಕ ವರ್ಗದ ಜನರಿಗೆ ಅನ್ಯಾಯವಾಗುತ್ತಿದೆ. ಇದರ ಜೊತೆಗೆ ಪರಿವರ್ತನೆಗೊಂಡ ಎಪಿಎಲ್ ಪಡಿತರ ಚೀಟಿಯನ್ನು ಪುನಃ ಸಮರ್ಪಕ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿಯನ್ನಾಗಿ ಮಾಡಲು ತಾಲುಕು ಮಟ್ಟದ ಅಧಿಕಾರಿಗಳ ಬಳಿ ತೆರಳಿದರೆ ಕೊಂಚವೂ ನಾಚಿಕೆ ಇಲ್ಲದೆ ಬಡವ ಶ್ರಮಿಕ ದುಡಿಯುವ ಹಿಂದುಳಿದ ವರ್ಗಗಳ ಜನರ ಬಳಿ 5,000 ರೂಪಾಯಿಗೂ ಹೆಚ್ಚು ಲಂಚ ಬೇಡಿಕೆ ಇಡುತ್ತಾ ಲಂಚ ಪಡೆಯುತ್ತಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಹಾಗಾಗಿ ಇದು ನಿಲ್ಲದೆ ಹೋದಲ್ಲಿ ಬಡವರಿಗೆ ಅನ್ಯಾಯವಾಗಲು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸುಮ್ಮನಿರದೆ ನೊಂದವರ ಜೊತೆಯಾಗಿ ಜಿಲ್ಲೆಯ ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಎದುರು ಬ್ರಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ವಿಜಯ್ ಕೊಡವೂರು, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ತಿಂಗಳಾಯ, ಸುರೇಂದ್ರ ಕುಲಾಲ್, ಖಜಾಂಚಿ ರಾಜೇಂದ್ರ ಪಂದುಬೆಟ್ಟು, ಮಾದ್ಯಮ ಪ್ರಮುಖ್ ಸುಶಾಂತ್, ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಕಳ ಮಂಡಲ ಅಧ್ಯಕ್ಷ ಪ್ರಸಾದ್ ಐಸಿರ, ಕಾಪು ಮಂಡಲ ಅಧ್ಯಕ್ಷ ಸಂತೋಷ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಆಶೋಕ್ ಸುವರ್ಣ, ನಾಗರಾಜ್ ಆಚಾರ್, ಆಶೋಕ್ ಸಾಲಿಗ್ರಾಮ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

