ಬೆಂಗಳೂರು ಕಂಬಳಕ್ಕೆ ಚಾಲನೆ: ಯುವರತ್ನ ಡಾ. ಪುನಿತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನಿತ್ ರಾಜ್ಕುಮಾರ್ ಅವರಿಂದ ಚಾಲನೆ
ಬೆಂಗಳೂರು ನ.25: ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ (Bengaluru Kambala) ಪಂದ್ಯ ಆಯೋಜಿಸಲಾಗಿದೆ. ನಮ್ಮ ಕಂಬಳ, ಬೆಂಗಳೂರು ಕಂಬಳ ಎಂಬ ಹೆಸರಿನಲ್ಲಿ ಶನಿವಾರ ಮತ್ತು ಭಾನುವಾರ (ನ.25, 26) ಎರಡು ದಿನಗಳ ಕಾಲ ಪಂದ್ಯ ನಡೆಯಲಿದೆ. ಈ ಕಂಬಳ ಕರೆಗೆ ಯುವರತ್ನ ಡಾ. ಪುನಿತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನಿತ್ ರಾಜ್ಕುಮಾರ್ (Ashwini Puneeth Rajkumar) ಅವರು ಶನಿವಾರ (ನ.25) ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, (EX CM BS Yadiyurappa) ಸಂಸದ ಸದಾನಂದ ಗೌಡ MP Sadananda Gauda), ಸಚಿವೆ ಶೋಭಾ ಕರಂದ್ಲಾಜೆ (MP Shobha Karandlaje), ಶಾಸಕ ಎಸ್. ಆರ್. ವಿಶ್ವನಾಥ್ (MLA SR Vishwanath) ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ (MLA Ashok Kumar Rai), ಉದ್ಯಮಿ ಬಂಜಾರಾ ಪ್ರಕಾಶ್ ಶೆಟ್ಟಿ, (MRG GROUP Director BAanjara Prakash Shetty) ಗುರುಕಿರಣ್ ಶೆಟ್ಟಿ,(Gurukiran shetty), ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, (KAUP MLA Suresh Shetty Gurme), ಡಾ. ದೇವಿಪ್ರಸಾದ್ ಶೆಟ್ಟಿ (DR Deviprsad Shetty), ಸಹಿತ ಗಣ್ಯರು ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೂ ಮೊದಲು ರಾಜ, ಮಹರಾಜ ಹೆಸರಿನ ಕಂಬಳ ಕೆರೆಗೆ ಅರ್ಚಕರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ದೈವ, ದೇವರ ಪ್ರಸಾದ ಕಂಬಳ ಕೆರೆಯ ನೀರಿಗೆ ಅರ್ಪಣೆ ಮಾಡಿ, ಯಾವುದೇ ಅಡ್ಡಿ- ಆತಂಕ ಎದುರಾಗದಂತೆ ಪ್ರಾರ್ಥನೆ ಸಲ್ಲಿಸಿ, ದೀಪ ಬೆಳಗಿಸಿ ಕಾಯಿ ಒಡೆದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಪಂದ್ಯಾವಳಿಯನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ. ಅಲ್ಲದೆ ಸಂಚಾರಿ ಪೊಲೀಸರು ಸಾರ್ವಜನಿಕರು ಕಟ್ಟುನಿಟ್ಟಾಗಿ ಟ್ರಾಫಿಕ್ ನಿಯಮ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ.
ಇನ್ನು ಕಂಬಳ ವೀಕ್ಷಣೆಗೆ ಬರುವ ಜನರು ಗೇಟ್ ನಂಬರ್ 1, 2, 3 ಹಾಗೂ 4ರ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳು ಫನ್ ವರ್ಲ್ಡ್ ಕಡೆಯಿಂದ ಪ್ರವೇಶಿಸಬೇಕು. ಯಾವುದೇ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6:30 ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳ ಮೈದಾನಕ್ಕೆ ಆಗಮಿಸಲಿದ್ದಾರೆ.
ಬೆಂಗಳೂರು ಕಂಬಳದ ವಿಶೇಷತೆ
6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು. ಕಂಬಳದಲ್ಲಿ 200 ಜೋಡಿ ಕೋಣಗಳು ಭಾಗವಹಿಸುವ ಸಾಧ್ಯತೆ ಇದೆ. ಕಂಬಳದ ಮುಖ್ಯ ವೇದಿಕೆಗೆ ಪುನಿತ್ ರಾಜ್ಕುಮಾರ್ ಹೆಸರು ಇಡಲಾಗಿದೆ. ಕಂಬಳದ ಟ್ರಾಕ್ (ಕರೆ)ಗೆ ರಾಜ ಮಹಾರಾಜ ಎಂದು ಹೆಸರು ಇಡಲಾಗಿದೆ.
ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ.
ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ ಇರಲಿದೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ ಕೂಡ ಆಯೋಜಿಸಲಾಗಿದೆ.
ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ. ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ. ಇದು ಕಂಬಳದ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ. 228 ಜೋಡಿ ಕೋಣಗಳ ರಿಜಿಸ್ಟ್ರೇಷನ್ ಆಗಿದ್ದು, 200 ಜೋಡಿ ಫೈನಲ್ ಆಗಿವೆ. ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ.
ಕೋಣಗಳ ಆರೈಕೆ
ಆಹಾರ, ನೀರಿನ ಬಗ್ಗೆ ಕೋಣಗಳ ಮಾಲೀಕರಿಂದ ವಿಶೇಷ ಕಾಳಜಿ ವಹಿಸಲಾಗುತ್ತದೆ. ಕೋಣಗಳಿಗೆ ಬೈಹುಲ್ಲು, ನೀರನ್ನು ಕೂಡ ಊರಿನಿಂದಲೇ ತರಲಾಗಿದೆ. ನೀರು ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ. ಹೀಗಾಗಿ ಊರಿನಿಂದಲೇ ಟ್ಯಾಂಕರ್ ಮೂಲಕ ನೀರು ತರಲಾಗಿದೆ. ಕಂಬಳದ ಸ್ಥಳಕ್ಕೆ ಪಶು ವೈದ್ಯರು, ನಾಟಿ ವೈದ್ಯರೂ ಕೂಡ ಬಂದಿದ್ದಾರೆ.
ಗೆದ್ದ ಕೋಣಗಳಿಗೆ ಬಹುಮಾನ
ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು, ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು, ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.

