ಬೆಂಗಳೂರು;ಶಿವಾಜಿ ನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇರಿಸಿದ್ದಾರೆ ಎಂದು ಹುಸಿ ಬಾಂಬ್ ಕರೆ ಮಾಡಲಾಗಿದ್ದು, ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಶಿವಾಜಿನಗರದ ಮಾರುಕಟ್ಟೆ ಪ್ರದೇಶದಲ್ಲಿ ಆಜಾಂ ಮಸೀದಿಗೆ ಬಾಂಬ್ ಇಟ್ಟಿರುವುದಾಗಿ ಬುಧವಾರ ರಾತ್ರಿ ಸುಮಾರು 10 ಗಂಟೆಗೆ 112 ಸಂಖ್ಯೆಗೆ ಕರೆ ಮಾಡಲಾಗಿದೆ.
ಶಿವಾಜಿನಗರ ಪೊಲೀಸ್ ಠಾಣೆ ಮತ್ತು ಪೂರ್ವ ವಿಭಾಗದ ಡಿಸಿಪಿ ಅವರಿಗೂ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗುತ್ತದೆ.
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಶಿವಾಜಿನಗರ ಪೊಲೀಸರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ಸುಮಾರು 10.30ಕ್ಕೆ ಬಂದ ಪೊಲೀಸರು ಒಂದು ಗಂಟೆವರೆಗೂ ಇಡೀ ಮಸೀದಿಯನ್ನು ಪರಿಶೀಲನೆ ನಡೆಸಿದ್ದಾರೆ.
ಮಸೀದಿಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸ್ಫೋಟಕ ವಸ್ತುಗಳು ಕಂಡು ಬರದ ಹಿನ್ನೆಲೆ ಇದೊಂದು ಹುಸಿ ಬಾಂಬ್ ಕರೆ ಎಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

