ಬೆಳಪು (ಪಣಿಯೂರು) ರೈಲು ನಿಲ್ದಾಣದಲ್ಲಿ ಮಂಗಳೂರು – ಮಡಂಗಾವ್ ಎಕ್ಸ್ಪ್ರೆಸ್ ರೈಲು ನಿಲುಗಡೆ ಆರಂಭ
ಬೆಳಪು : ಪಡುಬಿದ್ರಿ (ಪಣಿಯೂರು) ರೈಲು ನಿಲ್ದಾಣದಲ್ಲಿ ಸೋಮವಾರ ಮಂಗಳೂರು – ಮಡಂಗಾವ್ (ಗೋವಾ) ಎಕ್ಸ್ಪ್ರೆಸ್ ರೈಲು ನಿಲುಗಡೆ ಆರಂಭಗೊಂಡಿತು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ, ರೈಲು ನಿಲುಗಡೆ ಹೋರಾಟ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಪಡುಬಿದ್ರಿ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡ ರೈಲನ್ನು ಸ್ವಾಗತಿಸಲಾಯಿತು.
ಗೋವಾದಿಂದ ರೈಲು ಚಲಾಯಿಸಿಕೊಂಡು ಬಂದ ಚಾಲಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪಣಿಯೂರು ರೈಲು ನಿಲ್ದಾಣದ ಅಭಿವೃದ್ಧಿ, ಗೋವಾ ಎಕ್ಸ್ಪ್ರೆಸ್, ಮುಂಬಯಿ, ಬೆಂಗಳೂರು ರೈಲು ನಿಲಗಡೆಗೆ ಅವಕಾಶ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ನೀಡುತ್ತಾ ಬಂದಿದ್ದೇವೆ. ನಮ್ಮ ಹೋರಾಟಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಬಲ ನೀಡಿದ್ದು, ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಮೂಲಕವಾಗಿ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.
ಹೋರಾಟ ಸಮಿತಿಯ ರಾಕೇಶ್ ಕುಂಜೂರು, ಗ್ರಾಮಸ್ಥರು, ರೈಲ್ವೇ ಸ್ಟೇಷನ್ ಮಾಸ್ಟರ್ ಶಂಕರನ್, ಸಿಬ್ಬಂದಿಗಳಾದ ಸುಜಿತ್, ಆದೇಶ್ ಹೆಗ್ಡೆ, ಲಲಿತಾ, ಶಾಂತ, ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

