ಮಣಿಪಾಲ ಮಾಹೆಯಿಂದ “ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಕೇಂದ್ರ” ಲೋಕಾರ್ಪಣೆ
(Manipala) ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಉಡುಪಿಯ ಹಾವಂಜೆ ಬಳಿ, ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ (MHRC) ಅನ್ನು ಅನಾವರಣಗೊಳಿಸಿತು.
ಆಂಧ್ರ ಪ್ರದೇಶದ ರಾಜ್ಯಪಾಲ, ನಿವೃತ್ತ ನ್ಯಾಯಮೂರ್ತಿ ಸೈಯದ್ ಅಬ್ದುಲ್ ನಜೀರ್ ಅವರು ಉದ್ಘಾಟಿಸಿದರು.
ಎಂಎಚ್ಆರ್ಸಿ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಸೈಯದ್ ಅಬ್ದುಲ್ ನಜೀರ್, ಮಾಹೆಯು MHRC ಯೋಜನೆಯ ಮೂಲಕ, ಗಂಭೀರ ಮತ್ತು ಜೀವನದ ಕೊನೆಯ ಹಂತದಲ್ಲಿರುವ ರೋಗಿಗಳ ಮತ್ತು ಅವರ ಕುಟುಂಬದವರ ನೋವು ನಿವಾರಿಸುವ ಮಾನವೀಯತೆಯ ಕೆಲಸವನ್ನು ಒಂದು ಮೂಲಭೂತ ಮಾನವ ಹಕ್ಕು ಎನ್ನುವಂತೆ ಪರಿಗಣಿಸಿರುವುದು ಶ್ಲಾಘನೀಯ ಎಂದರು.
ಕ್ಯಾನ್ಸರ್ ಪ್ರಕರಣಗಳ ಕುರಿತು ಆತಂಕಕಾರಿ ಅಂಕಿ ಅಂಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಜ್ಯಪಾಲರು, 2022ರಲ್ಲಿ 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಅದರಲ್ಲಿ ಶೇ 10 ರಷ್ಟು ಜನರಿಗೆ ಮಾತ್ರ ಆರೈಕೆ ಪಡೆಯುವ ಆರ್ಥಿಕ ಶಕ್ತಿ ಇದೆ. MHRC ಯೋಜನೆಯು ಒಂದು ಮಹತ್ವದ ಹೆಜ್ಜೆಯಾಗಿದ್ದು, ಇದು ಆಸ್ಪತ್ರೆ ಕೇಂದ್ರಿತ ಮಾದರಿಗಳಿಂದ ದೂರವಾಗಿ, ಆತ್ಮೀಯತೆಯ ಆರೈಕೆಯನ್ನು ಒದಗಿಸುತ್ತದೆ. ಇದರಿಂದಾಗಿ ಕುಟುಂಬಗಳ ಮೇಲಿನ ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟವನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಎಂದು ರಾಜ್ಯಪಾಲರು ಹೇಳಿದರು.
ವಾಸಂತಿ ಆರ್ ಪೈ, ಟ್ರಸ್ಟಿ, ಮಾಹೆ ಟ್ರಸ್ಟ್, ಡಾ ರಂಜನ್ ಪೈ, ಮಾಹೆ ಟ್ರಸ್ಟ್ ಅಧ್ಯಕ್ಷರು ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ(ಎಂಇಎಂಜಿ) ಮುಖ್ಯಸ್ಥರು, ಡಾ. ಅಶೋಕ್ ಪೈ, ಅಧ್ಯಕ್ಷರು ಟಿಎಂಎ ಪೈ ಫೌಂಡೇಶನ್, ಡಾ ಎಚ್.ಎಸ್. ಬಲ್ಲಾಳ್, ಪ್ರೊ ಚಾನ್ಸಲರ್ ಮಾಹೆ, ಲೆಫ್ಟಿನೆಂಟ್ ಜನರಲ್ ಡಾ. ಎಂಡಿ ವೆಂಕಟೇಶ್, ವೈಸ್ ಚಾನ್ಸಲರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ ಸುವರ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

