ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿ ಸುಮಾರು ೭೭ ದಿನಗಳು ಕಳೆದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಮಾತನಾಡಿದ್ದಾರೆ.
ಎಸ್‌ಟಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮಣಿಪುರದಲ್ಲಿ ಎರಡು ಜನಾಂಗಗಳ ನಡುವೆ ಹಿಂಸಾಚಾರ ಆರಂಭವಾದಾಗಿನಿಂದ ಪ್ರಧಾನಿ ಮೋದಿಯವರು ಈ ಕುರಿತು ಮಾತನಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಎಷ್ಟೇ ಟೀಕೆಗಳು ಬಂದರೂ ಮೌನಹಿಸಿದ್ದ ಪ್ರಧಾನಿ ಮೋದಿಯವರು 77 ದಿನಗಳ ನಂತರ ಮೌನ ಮುರಿದಿದ್ದು, ಈ ಘಟನೆಗಳಿಂದ ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ ಎಂದು ಹೇಳಿದ್ದಾರೆ.
ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರದ ವಿಡಿಯೋ ಬಹಿರಂಗಗೊಂಡ ನಂತರ ಮಾತನಾಡಿರುವ ಪ್ರಧಾನಿ ಮೋದಿ, ಮಣಿಪುರದ ಘಟನೆಯು ಮುನ್ನೆಲೆಗೆ ಬಂದಿರುವುದು ಯಾವುದೇ ನಾಗರಿಕತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ದೇಶ ನಾಚಿಕೆಪಡುವಂತಾಗಿದೆ. ಅಪರಾಧದ ವಿರುದ್ಧ ವಿಶೇಷವಾಗಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳಲು ಕಾನೂನುಗಳನ್ನು ಬಲಪಡಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಘಟನೆಯು ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರದಿಂದ ಆಗಿರಬಹುದು. ಅಪರಾಧಿ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಶಿಕ್ಷೆಯಿಂದ ಮುಕ್ತನಾಗಬಾರದು ಎಂದು ಪ್ರಧಾನಿ ಹೇಳಿದರು.
ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ಯಾವುದೇ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಣಿಪುರದ ಹೆಣ್ಣುಮಕ್ಕಳಿಗೆ ಏನಾಯಿತು ಎಂಬ ಬಗ್ಗೆ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ವೈರಲ್ ವಿಡಿಯೋ ತುಂಬಾ ಆಘಾತ ಉಂಟು ಮಾಡಿದೆ. ಈ ರೀತಿಯ ಘಟನೆಗಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಕೋಮುವಾದಿ ಗಲಭೆಗಳಲ್ಲಿ ಮಹಿಳೆಯರನ್ನು ಆಯುಧವಾಗಿ ಬಳಸಿಕೊಳ್ಳುವುದು ಅತಿ ದೊಡ್ಡ ಸಾಂವಿಧಾನಿಕ ದುರ್ಬಳಕೆಯಾಗಿದೆ ಎಂದೂ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

