ಮೂಡುಬಿದಿರೆ, ವಿದ್ಯಾಗಿರಿ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿ
ವಿದ್ಯಾಗಿರಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಕನ್ನಡ ವಿಭಾಗ ಆಯೋಜಿಸಿದ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಪಿ. ಸಂಪತ್ ಕುಮಾರ್ ಭಾಗವಹಿಸಿದರು.
ಅವರು ಈ ಸಂದರ್ಭ ಮಾತನಾಡಿ, ಪ್ರಕೃತಿ ಅತ್ಯಮೂಲ್ಯ ಸಂಪತ್ತು. ನಮ್ಮ ಒಳನೋಟದಿಂದ ಪ್ರಕೃತಿಯ ಸಾಕಷ್ಟು ವಿಚಾರಗಳನ್ನು ತಿಳಿಯಬಹುದು. ಆದರೆ, ನಾವು ಪ್ರಕೃತಿಯನ್ನು ಅಧ್ಯಯನ ಮಾಡದೇ ಕಲಿಕೆಯಿಂದ ವಂಚಿತರಾಗುತ್ತಿದ್ದೇವೆ ಎಂದರು.
ಈಚಿನ ದಿನಗಳಲ್ಲಿ ನಾವೆಲ್ಲ ಧರ್ಮ ಗ್ರಂಥಗಳನ್ನು ಆಧರಿಸಿಕೊಂಡು ಜೀವನದ ಮೌಲ್ಯಗಳನ್ನು ಹುಡುಕಾಡುತ್ತಿದ್ದೇವೆ. ಆದರೆ, ಪ್ರಾಣಿ-ಪಕ್ಷಿಗಳು ಪರಿಸರವನ್ನು ಅವಲಂಬಿಸಿಕೊಂಡು ಸಹಜವಾಗಿ ಬದುಕುತ್ತಿವೆ. ಪರಿಸರವನ್ನು ಪ್ರೀತಿಸಿ, ಸೂಕ್ಷ್ಮತೆಯಿಂದ ಬದುಕು ರೂಪಿಸಿಕೊಳ್ಳಿ’ ಎಂದರು.
ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ‘ಪರಿಸರದ ಜೊತೆಗಿನ ನಮ್ಮ ಒಡನಾಟದ ಮೇಲೆ ನಮ್ಮ ಭವಿಷ್ಯ ನಿರ್ಧರಿತವಾಗುತ್ತದೆ.
ಮನುಷ್ಯ ಪ್ರಕೃತಿಯ ಭಾಗ ಎನ್ನುವುದನ್ನು ಮರೆತು ಪ್ರಕೃತಿಯ ಒಡೆಯನಂತೆ ವರ್ತಿಸುತ್ತಿದ್ದಾನೆ’ ಎಂದರು.
ವಿಜ್ಞಾನ, ಸಾಹಿತ್ಯ, ವಾಣಿಜ್ಯ ಮತ್ತಿತರ ಜ್ಞಾನ ಶಾಖೆಯನ್ನು ನಾವು ಯಾವ ರೀತಿಯಾಗಿ ತೆಗೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಅಳಿವು-ಉಳಿವು ನಿಂತಿದೆ ಎಂದರು.
ಉರಗ ತಜ್ಞ ಹಾಗೂ ಸಾಹಿತಿ ಗುರುರಾಜ್ ಸನಿಲ್, ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಜ್ಯೋತಿ ರೈ, ಪ್ರಾಧ್ಯಾಪಕ ಕೃಷ್ಣರಾಜ ಕರಬ ಇದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ ಕೈರೋಡಿ ಸ್ವಾಗತಿಸಿ, ಪ್ರಾಧ್ಯಾಪಕ ಹರೀಶ್ ಟಿ.ಜಿ. ವಂದಿಸಿದರು. ವಿದ್ಯಾರ್ಥಿನಿ ಸುಶ್ಮಿತಾ ನಿರೂಪಿಸಿದರು.

